ವಿಧಾನ ಪರಿಷತ್ ಚುನಾವಣೆ- ಕಾಂಗ್ರೆಸ್ ಚುನಾವಣಾ ಪೂರ್ವ ಸಿದ್ಧತಾ ಸಭೆ…
ಮಂಗಳೂರು: ವಿಧಾನ ಪರಿಷತ್ತಿಗೆ ದ.ಕ. ಸ್ಥಳೀಯ ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರ ಗೆಲುವಿಗೆ ಸಂಬಂಧಿಸಿ ಚುನಾವಣಾ ಪೂರ್ವ ಸಿದ್ಧತಾ ಸಭೆ ಸೋಮವಾರ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು.
ಡಿ. 4 ರಂದು ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ 13 ವಿಧಾನ ಸಭಾಕ್ಷೇತ್ರಗಳ ಎರಡೆರಡು ಬ್ಲಾಕ್ಗಳ ಅಧ್ಯಕ್ಷರು ಮತ್ತು ಪಕ್ಷದ ವೀಕ್ಷಕರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸೋಮವಾರದ ಈ ಸಭೆ ಜರಗಿದ್ದು, ಎಲ್ಲಾ 13 ವಿಧಾನ ಸಭಾ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳು ಮತ್ತು ಕಳೆದ ಬಾರಿ ಸ್ಪರ್ಧಿಸಿದ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಪ್ರಸ್ತುತ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಜುನಾಥ ಭಂಡಾರಿ ಅವರನ್ನು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಲು ಉಭಯ ಜಿಲ್ಲೆಗಳ ಪ್ರತಿನಿಧಿಗಳು ಒಮ್ಮತದ ನಿರ್ಣಯ ಕೈಗೊಂಡರು. ಈ ನಿಟ್ಟಿನಲ್ಲಿ ಪಕ್ಷೇತರ ಚುನಾಯಿತ ಪ್ರತಿನಿಧಿಗಳ ಮನ ಒಲಿಸಲು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
2018 ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ಮತ್ತು ಸೋತ ಅಭ್ಯರ್ಥಿಗಳ ಮಾರ್ಗದರ್ಶನ ಪಡೆದು ಮತದಾರರ ಬೆಂಬಲ ಪಡೆದು ಪ್ರಥಮ ಪ್ರಾಶಸ್ತ್ಯದ ಮತವನ್ನು ತನಗೆ ನೀಡಿ ಬಹುತದಿಂದ ಗೆಲ್ಲಿಸುವಂತೆ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರು ಮನವಿ ಮಾಡಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕ ಯು.ಟಿ. ಖಾದರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ, ಮೊದಿನ್ ಬಾವಾ, ಮುಖಂಡರಾದ ರಘು, ಮಿಥುನ್ ರೈ ಅವರು ಭಾಗವಹಿಸಿದ್ದರು.