ಆತ್ಮ ನಿರ್ಭರ ಭಾರತಕ್ಕೆ ಕಲ್ಲಡ್ಕದ ಕೊಡುಗೆ – ಪ್ರಧಾನ ಮಂತ್ರಿಯವರಿಗೆ ತಲುಪಿದ ಗೋಮಯ ಹಣತೆ…

ಬಂಟ್ವಾಳ: ಆತ್ಮನಿರ್ಭರ ಭಾರತ ಕಲ್ಪನೆಯನ್ನು ನೀಡಿದ ಪ್ರಧಾನ ಮಂತ್ರಿಯವರಿಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ತಯಾರಾದ ದೇಸೀಯ ಹಸುಗಳ ಗೋಮಯದಿಂದ ತಯಾರಾದ ಹಣತೆಗಳನ್ನು ಕಳುಹಿಸಲಾಗಿದೆ ಎಂದು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್ ಕಟ್ಟೆ ತಿಳಿಸಿದ್ದಾರೆ.
ಈ ವರ್ಷದ ದೀಪಾವಳಿಗೆ ಕಲ್ಲಡ್ಕದ ಹಣತೆಗಳು ನಾಡಿನೆಲ್ಲೆಡೆ ಬೆಳಕು ನೀಡಲಿವೆ. ವಿದ್ಯಾರ್ಥಿಗಳೇ ಸೇರಿಕೊಂಡು ಹಣತೆಗಳನ್ನು ಸಿದ್ಧಪಡಿಸಿದ್ದು ಇಲ್ಲಿ ತಯಾರಾದ 10 ಸಾವಿರಕ್ಕಿಂತಲೂ ಹೆಚ್ಚಿನ ಹಣತೆಗಳನ್ನು ವಿತರಿಸಲಾಗಿದೆ. ಎಲ್ಲಾ ಕಡೆಯಿಂದಲೂ ಹೆಚ್ಚಿನ ಬೇಡಿಕೆ ಬರುತ್ತಿದ್ದರೂ ಪೂರೈಸಲಾಗುತ್ತಿಲ್ಲ ಎಂದು ಅವರು ತಿಳಿಸಿದರು.

ವಿದ್ಯಾಸಂಸ್ಥೆಯಲ್ಲಿ ಗೋಶಾಲೆ ಇದ್ದು ಗೋಮಯವನ್ನು ಹದಗೊಳಿಸಿ ಬಳಿಕ ನಿರ್ಧಿಷ್ಟ ಅಚ್ಚಿನಲ್ಲಿ ಒತ್ತಿ ಹಣತೆಗಳನ್ನು ತಯಾರಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ವಿದ್ಯಾರ್ಥಿಗಳು ಸ್ಥಳೀಯ ಮಾತೃಮಂಡಳಿಯೊಂದಿಗೆ ಸೇರಿಕೊಂಡು ಪ್ರತಿ ದಿನ ವಿವಿಧ ತಂಡಗಳಲ್ಲಿ ಸಹಸ್ರಾರು ಹಣತೆಗಳನ್ನು ತಯಾರಿಸಿದ್ದಾರೆ.ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಂಡಿದ್ದು ವಿದ್ಯಾರ್ಥಿಗಳ ಹೆತ್ತವರು ಹಣತೆ ತಯಾರಿಕೆಯಲ್ಲಿ ಕೈ ಜೋಡಿಸಿದ್ದಾರೆ. ಹಣತೆಯ ತಯಾರಿಗೆ ವ್ಯಯಿಸಲಾದ ಖರ್ಚನ್ನು ಸರಿದೂಗಿಸುವ ನಿಟ್ಟಿನಲ್ಲಿ ಒಂದು ಹಣತೆಯನ್ನು 5 ರೂ.ಗಳಂತೆ ಮಾರಾಟಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಕಾಮರ್ಸ್ ವಿದ್ಯಾರ್ಥಿಗಳ ಮೂಲಕ ಇ-ಮಾರ್ಕೆಟಿಂಗ್ ಮೂಲಕ ಗೂಗಲ್‍ನಲ್ಲಿ ಮುಂಗಡ ಬುಕ್ಕಿಂಗ್ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರು ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಮಹಿಳೆಯರು ಕಲ್ಲಡ್ಕದ ಹಣತೆಗಳನ್ನು ವಿತರಿಸುತ್ತಿದ್ದಾರೆ. ಆದರೆ ಎಲ್ಲರಿಗೂ ನೀಡುವುದು ಅಸಾಧ್ಯವಾಗಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ಹಣತೆಯ ವೈಶಿಷ್ಟ್ಯ:
ಹಣತೆಗಳು ಹಗುರವಾಗಿದ್ದು ನೀರಿನ ಕೆರೆಗಳಲ್ಲಿ ಅಥವಾ ಕೊಳಗಳಲ್ಲಿಯೂ ದೀಪಗಳನ್ನು ಹಚ್ಚಿ ದೀಪಾವಳಿ ಸಂಬ್ರಮವನ್ನು ಆಚರಿಸಬಹುದಾಗಿದೆ. ಹಣತೆಗಳು ಕೆಳಗೆ ಬಿದ್ದರೂ ಹುಡಿಯಾಗುವುದಿಲ್ಲ. ಎಣ್ಣೆ ಅಥವಾ ತುಪ್ಪ ಹಾಕಿ ಉರಿಸುವುದರಿಂದ ಪರಿಸರಕ್ಕೂ ಹಾನಿ ಇಲ್ಲ. ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ. ಈ ವರ್ಷ ಪಟಾಕಿ ಮಾರಾಟಕ್ಕೆ ನಿಷೇಧವಿರುವುದರಿಂದಲೂ ಹಣತೆಯ ಬೆಳಕಿನಲ್ಲಿಯೇ ದೀಪಾವಳಿಗೆ ವಿಶೇಷ ಮೆರಗು ನೀಡಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button