ಬಿ.ಸಿ.ರೋಡಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟನೆ…

ಬಂಟ್ವಾಳ: ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ವಿವೇಕಾನಂದ ವಿದ್ಯಾವರ್ಧಕ ಸಂಘ ಪತ್ತೂರು , ಸಹಕಾರ ಭಾರತಿ ದ.ಕ. ಜಿಲ್ಲೆ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಪುತ್ತೂರು ಇವುಗಳ ಸಹಯೋಗದೊಂದಿಗೆ ಉದ್ಯೋಗ ನೈಪುಣ್ಯ ತರಬೇತಿಯು ಗೀತಾಂಜಲಿ ಸಭಾಭವನ ಬಿ.ಸಿ.ರೋಡಿನಲ್ಲಿ ಅ.5 ರಂದು ಉದ್ಘಾಟನೆಗೊಂಡಿತು.
ಸಮಾರಂಭದಲ್ಲಿ ಗ್ರಾಮ ವಿಕಾಸ ಸಮಿತಿ ವಿಭಾಗ ಸಹ ಸಂಯೋಜಕ ಜಿತೇಂದ್ರ ಆಶಯ ಭಾಷಣ ಮಾಡಿ, ಭಾರತವು ಆರ್ಥಿಕವಾಗಿ ಸಮರ್ಥವಾಗಲು ಗ್ರಾಮ ಮಟ್ಟದಲ್ಲಿ ಪರಿವರ್ತನೆಯಾಗಬೇಕು. ಸ್ವಾವಲಂಬನೆಯಿಂದ ಆತ್ಮನಿರ್ಭರ ಭಾರತ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರೂ ಮಾಡುವ ವೃತ್ತಿಯಲ್ಲಿ ಉತ್ತಮ ಕೌಶಲ್ಯವನ್ನು ಬೆಳೆಸಿಕೊಂಡು ಪ್ರಾಮಾಣಿಕವಾಗಿ ದುಡಿದರೆ ದೇಶಕ್ಕೆ ಮಾಡುವ ದೊಡ್ಡ ಸೇವೆಯಾಗುತ್ತದೆ ಎಂದರು.
ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ ಅದ್ಯಕ್ಷತೆ ವಹಿಸಿ ಮಾತನಾಡಿ ತರಬೇತಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡುವುದರಿಂದ ಬ್ಯಾಂಕ್‍ಗಳಲ್ಲಿ ಆರ್ಥಿಕ ಸಹಾಯ ಪಡೆಯಲು ಅನುಕೂಲವಾಗುತ್ತದೆ ಎಂದರು.
ರಾ.ಸ್ವ. ಸಂಘದ ಪುತ್ತೂರು ಜಿಲ್ಲಾಕಾರ್ಯವಾಹ ವಿನೋದ್ ಕುಮಾರ್ ಕೊಡ್ಮಾಣ್ ಅತಿಥಿಯಾಗಿ ಭಾಗವಹಿಸಿದ್ದರು. ದ.ಕ.ಜಿಲ್ಲೆ ಸಹಕಾರ ಭಾರತಿ ಕಾರ್ಯದರ್ಶಿ ಕೃಷ್ಣ ಕೊಂಪದವು ತರಬೇತಿಯ ಮಾಹಿತಿ ನೀಡಿದರು.
ಮನಮೋಹನ ನಯನಾಡು ಸ್ವಾಗತಿಸಿದರು. ಸಂಯೋಜಕ ವೆಂಕಟ್ರಮಣ ಹೊಳ್ಳ ಮತ್ತು ವಿವಿಧ ವಿಷಯಗಳ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು. ವಿಠಲ ಕುಮಾರ ಪಾಂಡವರಕಲ್ಲು ಗೀತೆ ಹಾಡಿದರು. ಶಿಬಿರದ ಸಂಚಾಲಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು. ಹರೀಶ ಕಾಡಬೆಟ್ಟು ವಂದಿಸಿದರು.
ಶಿಬಿರದಲ್ಲಿ 150 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ತರಬೇತಿಯು ಅ. 10 ರ ವರೆಗೆ ನಡೆಯಲಿದೆ. ಅಲ್ಯೂಮಿನಿಯಮ್ ಫೆಬ್ರಿಕೇಶನ್ ಮತ್ತು ವೆಲ್ಡಿಂಗ್, ಇಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್, ಕೃಷಿ ಯಂತ್ರೋಪಕರಣ ದುರಸ್ತಿ, ಇಲೆಕ್ರ್ಟಿಕ್ ಉಪಕರಣಗಳ ದುರಸ್ತಿ, ಹೈನುಗಾರಿಕೆ, ಗ್ರಾಹಕ ಮಾಹಿತಿ ಕೇಂದ್ರ, ಫ್ಯಾಶನ್ ಡಿಸೈನ್ಸ್, ಜೇನು ಕೃಷಿ ಮತ್ತು ಮೀನು ಸಾಕಾಣಿಕೆ, ಮೊಬೈಲ್ ರಿಪೇರಿ, ಸಿಸಿ ಟಿವಿ ಅಳವಡಿಕೆಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.

Sponsors

Related Articles

Leave a Reply

Your email address will not be published. Required fields are marked *

Back to top button