ರಾಮಕಥೆಯ ನೃತ್ಯ ಭಾಷ್ಯದ ಸತ್ಯ….

ರಾಮಾಯಣವೆಂಬ ಜಾಗತಿಕ ಮಹಾಕಾವ್ಯ ಬಹುಭಾಷೆಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಅನೇಕಾನೇಕ ಮಹಾಕವಿಗಳು ತಮ್ಮದೇ ರಾಮಾಯಣವನ್ನೂ ಬರೆದಿದ್ದಾರೆ. ಆದರೆ ನೃತ್ಯದ ಪರಿಭಾಷೆಗೆ ರಾಮಕಥೆಯನ್ನು ಅಳವಡಿಸಿಕೊಂಡವರು ವಿರಳ. ದೇಶದ ಶಾಸ್ತ್ರೀಯ — ನೃತ್ಯ ಪ್ರಕಾರಗಳಲ್ಲಿ ಸಮೂಹ ನೃತ್ಯ ರೂಪಕವಾಗಿ ರಾಮಾಯಣ ಕಾಣಸಿಕ್ಕಿದ್ದು0ಟು, ಮಹಿಳೆಯರ ಪ್ರಾಬಲ್ಯದೊಂದಿಗೇ. ಪುರುಷ ಕಲಾವಿದರು, ಅದರಲ್ಲೂ ಏಕವ್ಯಕ್ತಿ ನೃತ್ಯರೂಪಕವಾಗಿ ರಾಮಕಥೆ ಹೇಳಿದವರು ವಿರಳಾತಿವಿರಳ. ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದ್ವಾನ್ ಸತ್ಯನಾರಾಯಣ ರಾಜು ಅವರು “ರಾಮಕಥಾ” ಶಿರೋನಾಮೆಯೊಂದಿಗೆ ರಾಮಾಯಣದ ಆಯ್ದ ಕಥೆಗಳಿಗೆ ನೃತ್ಯಭಾಷ್ಯ ಕಟ್ಟಿಕೊಡುವ ಮೂಲಕ ರಸೋತ್ಪತ್ತಿ ಮಾಡುತ್ತಿರುವುದಂತೂ ಸತ್ಯ. ಈ ವಿಚಾರ ಮತ್ತೊಮ್ಮೆ ನಿಜಗೊಂಡದ್ದು, ಇತ್ತೀಚಿಗೆ ಧರ್ಮಸ್ಥಳದಲ್ಲಿ ನಡೆದ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳ 88ನೇ ಅಧಿವೇಶನದ ಮಹತ್ವಪೂರ್ಣ ಲಲಿತಕಲಾ ಗೋಷ್ಠಿಯಲ್ಲಿ, ಸತ್ಯ ಅವರು ರಾಮಕಥೆಯನ್ನು ಪ್ರಸ್ತುತಪಡಿಸಿದಾಗ.

ಭರತನಾಟ್ಯದ ಅರೆಮಂಡಿ, ಸ್ಥಾನಕ, ರೇಖೆ, ಅಡವುಗಳ ಖಾಚಿತ್ಯ, ಅರ್ಧಿ, ಶೊಲ್ಕಟ್ಟು, ಜತಿಗಳ ನಿರ್ವಹಣೆಯಲ್ಲಿ ಸತ್ಯ ಅವರಿಗೆ ಸತ್ಯ ಅವರೇ ಸಾಟಿ. 90 ನಿಮಿಷಗಳ ಕಾಲ ಏಕಪ್ರಕಾರದ ದೈಹಿಕ ಕ್ಷಮತೆಯನ್ನು ಕಾಯ್ದುಕೊಂಡು ಪರಕಾಯ ಪ್ರವೇಶದಂಥ ಅಭಿನಯ ತಾದಾತ್ಮ್ಯವನ್ನು ಬಹು ಪಾತ್ರಗಳಲ್ಲಿ ಬಸಿದು ಕೊಡುವ ಸತ್ಯ, ನಿಜವಾಗಿಯೂ ರಾಮಕಥೆಗೆ ದೈವಿಕ ಸ್ಪರ್ಶ ನೀಡಿ ಪ್ರೇಕ್ಷಕರು, ವಿಮರ್ಶಕರು, ರಸಜ್ಞರನ್ನು ಸೆರೆಹಿಡಿದು ಬಿಡುತ್ತಾರೆ.
ನಾಂದಿ ಪದ್ಯದಂತೆ ಬಳಕೆಯಾದ ತ್ಯಾಗರಾಜರ ಕೃತಿ “ಮೇಲುಕೋವಯ್ಯ” ಕ್ಕೆ ಪೂರ್ವ ಪಾದದಂತೆ ಅಳವಡಿಸಲ್ಪಟ್ಟ ಶೊಲ್ಕಟ್ಟಿಗೆ ಸತ್ಯ, ರಂಗಪ್ರವೇಶಗೈಯುತ್ತಾರೆ. ‘ಠುಮತ್ ಚಲತ್’ ರಾಮಚಂದ್ರ ಸಾಹಿತ್ಯಕ್ಕೆ ಶ್ರೀರಾಮನ ಬಾಲ್ಯ, ಕೌಸಲ್ಯೆಯ ಮಾತೃವಾತ್ಸಲ್ಯಗಳನ್ನು ಸುಕೋಮಲವಾಗಿ ಚಿತ್ರಿಸುತ್ತಾರೆ. ಪಟ್ಟಾಭಿಷೇಕದ ಸಂಭ್ರಮಕ್ಕೆ ಸರಿಹೊಂದುವ ಜತಿಗೆ ಅಡವುಗಳನ್ನು ಪೋಣಿಸಿಕೊಂಡು, ಅದೇ ಸಾಹಿತ್ಯಕ್ಕೆ ಅಹಲ್ಯ ಉದ್ಧರಣ, ಸೀತಾ ಕಲ್ಯಾಣ, ಮಂಥರಾ ಪ್ರಕರಣಗಳನ್ನು — ಒಂದೊಂದೂ ರಸಘಟ್ಟಿಗಳಾಗುವಂತೆ — ಅಭಿನಯಿಸಿ ಬಿಡುತ್ತಾರೆ. ದಶರಥರೋದನ, ಶ್ರೀರಾಮ ವನಗಮನ, ಅಂಬಿಗರ ಗುಹಮಿಲನ, ಶಬರಿ ಮೋಕ್ಷ — ಹೀಗೆ ಒಂದರ ಹಿಂದೊಂದರಂತೆ ಬರುವ ಕಥೆಗಳು ಸಮಯದ ಅರಿವೇ ಆಗದಂತೆ ಮಾಡಿಬಿಡುತ್ತವೆ. ರಂಗಪ್ರವೇಶಗೈಯುವಾಗ ಶ್ರೀರಾಮನ ಬಿಲ್ಲು-ಬಾಣಗಳನ್ನು ರಂಗವೇದಿಕೆಯಲ್ಲಿ ‘ಶ್ರೀರಾಮತ್ವ’ ದ ಪ್ರತೀಕವಾಗಿ ಪ್ರತಿಷ್ಠಾಪಿಸುವುದನ್ನು ಹೊರತುಪಡಿಸಿದರೆ, ರಾಮನ ಸುತ್ತ ಬರುವ ಪಾತ್ರಗಳನ್ನೇ ಅಭಿನಯಿಸಿ,
ರಾಮಕಥೆಯನ್ನು ಹೆಣೆದಿರುವುದು,ನಿರ್ದೇಶನ – ಸಂಯೋಜನಾ ಜಾಣ್ಮೆಯ ಜೊತೆಗೆ ಕಲಾವಿದನಿಗೆ ಎದುರಾಗುವ ಸವಾಲುಗಳನ್ನು ತೆರೆದಿಡುತ್ತದೆ. ಇದೆಲ್ಲವನ್ನೂ ಲೀಲಾಜಾಲವಾಗಿ ದಾಟಿ ಬರುವ ಸತ್ಯ, ಪ್ರತಿಯೊಂದು ಪಾತ್ರದ ದೇಹ ಭಾಷೆ (body language) , ಮುಖಾಭಿನಯ (facial expression) ಮತ್ತು ಪ್ರಸ್ತುತಿ (Presentation) ಗಳಲ್ಲಿ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಪ್ರೌಢತೆ ಮೆರೆಯುತ್ತಾರೆ.
ಬಹುಶ್ರುತ ದಾಸಸಾಹಿತ್ಯ “ಹನುಮಂತ ದೇವ ನಮೋ” (ಪೂರ್ವಿ ಕಲ್ಯಾಣಿ – ಆದಿ ) ಅನ್ಯಾದೃಶ ಘನತೆ-ಗಾಂಭೀರ್ಯಗಳ ಹನುಮಂತನನ್ನು ಚಿತ್ರಿಸುವುದಲ್ಲದೆ, ಸಾಗರ ಲಂಘನ, ಮುದ್ರೆಯುಂಗುರ ಪ್ರಕರಣ ಗಳ ಮೂಲಕ ಅದ್ಭುತ ಮತ್ತು ಕರುಣಾರಸಗಳ ಮಾದರಿ ಒದಗಿಸುತ್ತಾರೆ. ಮುಂದೆ ರಾವಣ ವಧೆಯ ಬಳಿಕ ‘ಕೋಮಲ ತರ ‘ (ದೀಕ್ಷಿತರ ಕೃತಿ – ಮಣಿರಂಗು) ಮಂಗಲ ಪದ್ಯದಂತೆ ಬಳಕೆಯಾಗಿ , ಪಟ್ಟಾಭಿಷೇಕ — ಆರತಿ ನಡೆದು, ಕೋದಂಡಕ್ಕೆ ಪುಷ್ಪಾರ್ಚನೆ ಸಲ್ಲಿಸುವಲ್ಲಿಗೆ ಮಂಗಲವಾಗುತ್ತದೆ.
ಏಕವ್ಯಕ್ತಿ ನೃತ್ಯ ರೂಪಕದುದ್ದಕ್ಕೂ ಶಾಸ್ತ್ರೀಯ ನೃತ್ಯ ಮಾರ್ಗದ ಎಲ್ಲಾ ವಿಭಾಗಗಳನ್ನೂ–ತಿಲ್ಲಾನವನ್ನೂ ಸೇರಿಸಿ ಅಳವಡಿಸಿಕೊಂಡಿರುವುದು, ಒಟ್ಟು ರೂಪಕದ ಮೌಲ್ಯವನ್ನು ವರ್ಧಿಸಿದೆ. ‘ನ ನೃತ್ಯಂ ಗೀತ ವಾದ್ಯಂ ಚ’ ಎಂಬಂತೆ ಅಕ್ಷರಶ: ಸಂಗೀತಾಧಾರಿಯಾಗಿಯೇ ನೃತ್ಯ ಸಂಯೋಜಿಸಿರುವುದು, ಕೃತಿಗಳನ್ನು ಜೋಡಿಸಿಕೊಂಡಿರುವುದು, ಪರಿಕಲ್ಪನೆ (ಉಷಾ ಆರ್.ಕೆ) , ಸಂಗೀತ – ಸಾಹಿತ್ಯ (ವಿದ್ವಾನ್ ಶ್ರೀವತ್ಸ ಬೆಂಗಳೂರು) , ನೃತ್ಯ ಸಂಯೋಜನೆ – ನಿರ್ದೇಶನ (ವಿದ್ವಾನ್ ಸತ್ಯನಾರಾಯಣ ರಾಜು) ಗಳ ಸಮನ್ವಯವನ್ನು ಯಶಸ್ವಿಯಾಗಿ ಎತ್ತಿಹಿಡಿದಿದೆ .
ಬಹುಪಾಲು ಎಲ್ಲಾ ಸಾಹಿತ್ಯವನ್ನು ಕಂಠಸ್ಥವಾಗಿಯೇ ಹಾಡುವ ಅಸಾಧಾರಣ ಗಾಯಕ ಕರ್ನಾಟಕ ಕಲಾಶ್ರೀ ವಿದ್ವಾನ್ ಶ್ರೀವತ್ಸ ಬೆಂಗಳೂರು,ನಟುವಾಂಗದಲ್ಲಿ ಸಹಕರಿಸಿದ ಶ್ರೀಮತಿ. ಚೈತ್ರ ಜಗದೀಶ್, ಪ್ರತಿಯೊಂದು ನಡೆಯನ್ನೂ ನಿಖರವಾಗಿ ಅನುಸರಿಸಿ ಮೃದಂಗ ನುಡಿಸಬಲ್ಲ ವಿದ್ವಾನ್ ಲಿಂಗರಾಜು, ಭಾವ ತುಂಬಿ ಕೊಳಲು ನುಡಿಸುವ ರಘು ನಂದನ ರಾಮಕೃಷ್ಣ ಬೆಂಗಳೂರು, ರಾಮಕಥೆಯ ಯಶಸ್ಸಿನಲ್ಲಿ ಸರಿಮಿಗಿಲೆನಿಸುವ ಪಾಲು ಕಬಳಿಸಿದರು. ಬೆಳಕು – ಸಂಯೋಜನೆ ಮಾಡಿದ ನವೀನ್ ಎ0. ಜಿ. ಯವರು ಕೂಡಾ ತಮ್ಮ ದೇಣಿಗೆಯನ್ನು ಯಶಸ್ವಿಯಾಗಿ ನೀಡಿದರು.
ಅಮೃತವರ್ಷಿಣಿ ಸಭಾಂಗಣದಲ್ಲಿ ಸಹಸ್ರಾರು ಪ್ರೇಕ್ಷಕರು ಪ್ರತಿ ದೃಶ್ಯಾoತ್ಯಕ್ಕೂ ಚಪ್ಪಾಳೆ, ಅಭಿನಂದನೆಗಳ ಮೂಲಕ ನೃತ್ತ – ನೃತ್ಯಗಳ ಸಮ ಪಾಕವನ್ನು ತಾವು ಅನುಭವಿಸುತ್ತಿರುವುದಕ್ಕೆ ಸಾಕ್ಷಿ ನುಡಿದರು. ಫೇಸ್ಬುಕ್, ಯುಟ್ಯೂಬ್, ಲೈವ್ ಚಾನಲ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳ ವೀಕ್ಷಕರೂ ಗಣನೀಯ ಸಂಖ್ಯೆಯಲ್ಲಿ ಮೆಚ್ಚುಗೆಯ ಪ್ರತಿಕ್ರಿಯೆಗಳನ್ನೂ ಆಗಾಗ ನೀಡುತ್ತಿದ್ದುದು ಸತ್ಯ ಅವರ ಸಾಮರ್ಥ್ಯಕ್ಕೆ ಸಾಕ್ಷಿ.
ಕಾರ್ಯಕ್ರಮದ ಕೊನೆಯಲ್ಲಿ ಸತ್ಯನಾರಾಯಣ ರಾಜು ಅವರ ನೃತ್ಯಶಾಲೆ ‘ಸಂಸ್ಕೃತಿ’ ದ ಟೆಂಪಲ್ ಆಫ್ ಆರ್ಟ್– ಇದರ ವಿದ್ಯಾರ್ಥಿಗಳಾದ ಗೌರಿ ಸಾಗರ್, ನಿಕಿತಾ ಮಂಜುನಾಥ್, ಪೃಥ್ವಿ, ತೇಜಸ್ವಿನಿ, ಪ್ರವಳಿಕಾ, ರುಚಿರ, ಶ್ರಾವಣಿ, ಅನುಷಾ ಮತ್ತು ಮಧುಚಂದ್ರ ಇವರುಗಳು ‘ನಾಗೇಂದ್ರಹಾರಾಯ’ (ರಾಗಮಾಲಿಕೆ – ಖಂಡಚಾಪು) ಮತ್ತು ‘ಚಂದ್ರಶೇಖರಂ ಭಜಾಮಿ ಸತತಂ’ (ಚಂದ್ರಕಾಂಸ್ – ಆದಿ)– ಈ ಎರಡು ಸಾಹಿತ್ಯಗಳನ್ನು ಸಮೂಹ ನೃತ್ಯವಾಗಿ ಪ್ರಸ್ತುತಪಡಿಸಿದರು. ಇಲ್ಲೂ ಸತ್ಯ ಅವರು ಗುರುಮುಖೇನ ಪಡೆದ ಸಂಯೋಜನಾ ವಿದ್ಯೆಯ ಬಿಗಿ, ಸಾಹಿತ್ಯಾವಲಂಬಿ ಹಿತ-ಮಿತ ವಿಸ್ತಾರದ ಸುಖ ಅನಾವರಣಗೊಂಡಿತು.

ಲೇ: ಕೆ.ವಿ. ರಮಣ್, ಮಂಗಳೂರು.

” ಒಂದು ಕ್ಷಣವೂ ಕಣ್ಣುಗಳನ್ನು ಆಚೀಚೆ ಕದಲಿಸುವಂತಿಲ್ಲ. “

” ನಿರೂಪಕರು ಸೂಚಿಸಿದಂತೆ, ಒಟ್ಟು ರಾಮಕಥೆಯ ನಡುವೆ ಒಂದರೆಕ್ಷಣ ಕಣ್ಣುಗಳನ್ನು ಆಚೀಚೆ ಕದಲಿಸಿದರೂ ನೋಡುಗರು ಏನನ್ನಾದರೂ ಕಳೆದುಕೊಳ್ಳುವುದು ಖಚಿತ. ಸತ್ಯನಾರಾಯಣ ರಾಜು ಅವರ ಕಾಲು, ಕುತ್ತಿಗೆ, ಕೈ, ಮುಖಗಳಂತೆ ದೇಹದ ಪ್ರತಿಯೊಂದು ಭಾಗಗಳೂ ಅಭಿನಯಿಸುತ್ತವೆ. ಮಾಂಸಖಂಡಗಳೂ ಮಾತನಾಡುತ್ತವೆ. ಒಂದು ಅದ್ಭುತ ನೃತ್ಯರೂಪಕ ಈ ರಾಮಕಥೆ. “

—- ಸಪತ್ನೀಕರಾಗಿ ಕಾರ್ಯಕ್ರಮ ಪೂರ್ತಿ ವೀಕ್ಷಿಸಿದ ಪದ್ಮವಿಭೂಷಣ ರಾಜರ್ಷಿ ಡಾಕ್ಟರ್. ಡಿ. ವೀರೇಂದ್ರ ಹೆಗ್ಗಡೆಯವರು.

Sponsors

Related Articles

Leave a Reply

Your email address will not be published. Required fields are marked *

Back to top button