ಕಾರ್ತಿಕ್ ಹತ್ಯೆ ಉನ್ನತ ಮಟ್ಟದ ತನಿಖೆಗೆ ಕ್ರಮ-ಸಚಿವ ಕೋಟ ಶ್ರೀನಿವಾಸ ಪೂಜಾರಿ….

ಪುತ್ತೂರು: ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಅವರ ಹತ್ಯೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ದ.ಕ. ಜಿಲ್ಲಾ ಎಸ್ಪಿ ಹಾಗೂ ಐಜಿ ಅವರೊಂದಿಗೆ ಮಾತುಕತೆ ನಡೆಸಲಾಗುವುದು ಹಾಗೂ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಲು ಸರಕಾರದಿಂದ ಕ್ರಮಕ್ಕೆ ವಿನಂತಿಸಲಾಗುವುದು ಎಂದು ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಹಾಗೂ ಬಂದರು ಮತ್ತು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಅವರು ಸೋಮವಾರ ಮೃತ ಕಾರ್ತಿಕ್ ಸುವರ್ಣ ಅವರ ಸಂಪ್ಯ ಸಮೀಪದ ಮೇರ್ಲ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು. ಈ ಸಂದರ್ಭದಲ್ಲಿ ಕಾರ್ತಿಕ್ ಅವರ ತಂದೆ ರಮೇಶ್ ಸುವರ್ಣ ಅವರಿಂದ ಹತ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಯಾವುದೇ ಹೊಡೆದಾಟದಂತಹ ಪ್ರಕರಣಗಳಲ್ಲಿ ಭಾಗಿಯಾಗದ ಅಮಾಯಕ ಕಾರ್ತಿಕ್‍ನನ್ನು ಹತ್ಯೆ ಮಾಡಿದ್ದಾರೆ. ಮನೆಯ ಮಗನ ಸಾವಿನಿಂದ ದಿಕ್ಕು ತೋಚದಂತೆ ಆಗಿದೆ. ಆತ ಯಾವುದೇ ಹಣಕಾಸು ವ್ಯವಹಾರದಲ್ಲಿ ಇರದಿದ್ದರೂ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಂದೆ ರಮೇಶ್ ಸುವರ್ಣ ಆರೋಪಿಸಿದರು.
ಪ್ರಕರಣದ ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಕೊಲೆ ಪೂರ್ವ ನಿಯೋಜಿತವಲ್ಲ ಆಕಸ್ಮಿಕ ಎಂದು ಬಿಂಬಿಸಿ ಪ್ರಕರಣದ ತೀವ್ರತೆಯನ್ನು ಕಡಿಮೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಸಂಪ್ಯ ಠಾಣೆಯ ಎದುರು ಸಿಸಿ ಕ್ಯಾಮರಾ ವ್ಯವಸ್ಥೆ ಇಲ್ಲ. ಇಲ್ಲಿನ ಪೋಲೀಸರು ಆರೋಪಿಗಳ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಠಾಣೆಯ ಎದುರೇ ಹೀಗೆ ಕೊಲೆ ನಡೆದರೆ ಜನಸಾಮಾನ್ಯರ ಸ್ಥಿತಿ ಏನು ? ಎಂದು ಹಿಂದು ಸಂಘಟನೆಗಳ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಿಂದೂ ಸಂಘಟನೆಗಳ ಮುಖಂಡರು ಸಚಿವರಲ್ಲಿ ಆರೋಪಿಸಿದರು.
ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಯಾವುದೇ ಆರೋಪಿಗಳ ರಕ್ಷಣೆಯಾಗಲು ಬಿಡುವುದಿಲ್ಲ. ಈಗ ಉನ್ನತ ಮಟ್ಟದ ತನಿಖೆ ಆಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಹಾಗೂ ನಾನು ತತ್‍ಕ್ಷಣ ಎಸ್ಪಿ ಹಾಗೂ ಡಿಜಿ ಅವರಲ್ಲಿ ಮಾತನಾಡುತ್ತೇವೆ. ಆ ತನಿಖೆಯೂ ಸರಿಯಾಗದಿದ್ದರೆ ಸಿಒಡಿ ತನಿಖೆ ನಡೆಸಲು ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದಲ್ಲಿ ಪೋಲೀಸರ ವಿಫಲತೆ ಆಗಿದ್ದಲ್ಲಿ ಇಲಾಖೆ ತನಿಖೆ ಮಾಡಿಸುತ್ತೇವೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮೃತ ಕಾರ್ತಿಕ್‍ನ ಸಹೋದರ ದೀಪಕ್, ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಆರ್. ಸಿ. ನಾರಾಯಣ, ಸಾಜ ರಾಧಾಕೃಷ್ಣ ಆಳ್ವ, ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಇದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button