ಕಲೆ/ಸಾಹಿತ್ಯ

ಪಂ| ವೆಂಕಟೇಶ್ ಕುಮಾರರ ಸರಸ ಸಂಧ್ಯಾರಾಗ…

ಪಂ| ವೆಂಕಟೇಶ್ ಕುಮಾರರ ಸರಸ ಸಂಧ್ಯಾರಾಗ…

ಲೇ: ಕೆ ವಿ ರಮಣ್ , ಮೂಡುಬಿದ್ರಿ

ಸರಿ ಸುಮಾರು ಹದಿನೆಂಟು ತಿಂಗಳುಗಳ ದೀರ್ಘ ನಿರ್ವಾತದ ಬಳಿಕ, ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು – ಅದರಲ್ಲೂ ಸಂಗೀತ ಕಚೇರಿಗಳು ಸಭಾಸದರ ಸಮ್ಮುಖದಲ್ಲಿ ತೆರೆದುಕೊಳ್ಳಲಾರಂಭಿಸಿವೆ. ಇದಕ್ಕೆ ಆಧಾರ ಒದಗಿಸಿದ್ದು ಡಾ|| ಎಂ. ಮೋಹನ ಆಳ್ವರು ಮೂಡಿಬಿದಿರೆಯ ಸ್ಕೌಟ್ಸ್- ಗೈಡ್ಸ್ ಕನ್ನಡ ಭವನದ ಮುಂಡ್ರಾದೇಗುತ್ತು ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಸೆ. 28 ರಂದು ಏರ್ಪಡಿಸಿದ ಪದ್ಮಶ್ರೀ ಪಂ| ವೆಂಕಟೇಶ್ ಕುಮಾರ್ ಧಾರವಾಡ ಮತ್ತು ಬಳಗದವರ ಸಂಧ್ಯಾರಾಗ , ಹಿಂದೂಸ್ತಾನಿ ಗಾಯನ ಕಚೇರಿ. ಅಪೂರ್ವ ಸ್ವರ ಶುದ್ಧಿ- ಬದ್ಧಿ , ಸಾಹಿತ್ಯ ಬದ್ಧತೆ, ಗಂಭೀರ ಶಾರೀರ -ಪ್ರಸ್ತುತಿಗಳಿಗೆ ಹೆಸರಾದ ವೆಂಕಟೇಶ್ ಕುಮಾರ್, ಅನಾಯಾಸದ ಕಂಠಸಾಮರ್ಥ್ಯದೊಂದಿಗೆ ರಾಗಗಳ ಆಯ್ಕೆ, ಪಕ್ಕವಾದ್ಯ ಮತ್ತು ಸಭಾಸಂವಹನದ ಮೂಲಕ ಒಟ್ಟು ಕಾರ್ಯಕ್ರಮವನ್ನು ಸರಸ ಸಂಧ್ಯಾರಾಗವಾಗಿ ಮಾರ್ಪಡಿಸಿದರು. ಶಾಸ್ತ್ರೀಯ ಸಂಗೀತ ಹೇಳುವ ಆಧ್ಯಾತ್ಮಿಕ ಸಂಬಂಧವನ್ನೂ ಬೆಸೆದು ಸ-ರಸ , ಅಂದರೆ ರಸೋತ್ಪತ್ತಿಗೆ ಕಾರಣವಾಗುವ ಕಲಾಪ್ರಸ್ತುತಿಯಾಗಿಯೂ ರೂಪಿಸಿದರು.
ಮೊದಲರ್ಧದ ಒಂದು ಘಂಟೆಯ ಅವಧಿಯನ್ನು ಎರಡು ರಾಗಗಳಿಗೆ ಮೀಸಲಿಟ್ಟರು ವೆಂಕಟೇಶ್ ಕುಮಾರ್. ಆರಂಭದ ‘ಮುಲ್ತಾನಿ’ ಯ ವಿಲಂಬಿತ್ ಬಂದಿಶ್ ನಲ್ಲಿ ನಿಸಗಮಪದನಿಸ,ಪಮಪಗಾಮಗರಿಸ ಸಹಿತ ಎಳೆ ಎಳೆಯಾಗಿ ರಾಗವನ್ನು ಅರಳಿಸಿದ ಅವರು ತ್ರಿಸ್ಥಾಯಿಗಳ ಸುಭಗ- ಸರಸ ಸಂಚಾರ ಮಾಡಿಸಿದರು. ‘ ಸುಂದರ್ ಸುರ್ ಜನ್ ವಾಸಾಯಿರೆ’ ಸಾಲುಗಳಲ್ಲಿ ದ್ರುತ್ ಗೆ ತೊಡಗಿ ‘ನಿಸ್ ದಿನ್ ತುಮ್ಹರೋ ಧ್ಯಾನ್ ‘ ಎಂಬಲ್ಲಿ ‘ಧ್ಯಾನ’ ದ ಪೋಷಣೆ ಮಾಡಿದರು.
ದಕ್ಷಿಣೋತ್ತರ ಪದ್ಧತಿಗಳೆರಡರಲ್ಲೂ ಹಂಸಧ್ವನಿಯೆಂದು ಜನಜನಿತವಾಗಿರುವ ಔಡವ ರಾಗಕ್ಕೆ ಹೈವತ ಸೇರ್ಪಡೆಗೊಂಡ ‘ಶಂಕರ’ ಎರಡನೆಯ ರಾಗವಾಗಿ ತೆರೆದುಕೊಂಡಿತು. ವೆಂಕಟೇಶ್ ಕುಮಾರ್ ಈ ರಾಗದ ‘ ಪಕ್ಕಡ್ ‘ ಸ್ಥಾನಗಳಲ್ಲಿ ಒಂದಾದ ‘ ನಿದಸ ‘ ಪ್ರಯೋಗದ ಸೌಂದರ್ಯವನ್ನು ಎತ್ತಿ ತೋರಿದರು.ಇದಕ್ಕಾಗಿ ಸಂವಾದಿನಿಯನ್ನು ಬಳಸಿಕೊಂಡ ಅವರು , ಅಷ್ಟೇ ಸಮರ್ಥ ‘ ಸಂಗತ್ ‘ ಮಡಿದ ಪ್ರೊ | ನರೇಂದ್ರ ಎಲ್ ನಾಯಕ್ ಅವರ ಸಹಕಾರರೊಂದಿಗೆ ಉತ್ಕೃಷ್ಟ ರಾಗ ಚಿತ್ರಣ ನೀಡಿದರು. ‘ ಯೋನಿ ಸಾಜನಿ’ ಅನ್ನುವ ಸಾಹಿತ್ಯ-ಸ್ವರ ಸಂಯೋಜನೆಯಂತೂ ಆಪ್ಯಾಯಮಾನವಾಗಿ ಮೂಡಿಬಂತು. ಹಿತಮಿತವಾಗಿ ಅಲ್ಲಲ್ಲಿ ಬೆಸೆದುಕೊಂಡ ‘ ತಾನ್’ ಗಳು ರಾಗದ ಪ್ರಸ್ತುತಿಗೆ ಮತ್ತಷ್ಟು ಅಲಂಕಾರ- ಘನತೆ ತಂದಿತ್ತವು.
ಉತ್ತರಾರ್ಧದ ಒಂದು ಘಂಟೆಯ ಸಮಯದಲ್ಲಿ ದಾಸರ ಪದಗಳು -ವಚನಗಳು ವಿಜೃಂಭಿಸಿದವು. ತನ್ನದೇ ಸಂಯೋಜನೆಯ ಜತೆಗೆ ಬಹುಶ್ರುತ ಮತ್ತು ಕೋರಿಕೆಯ ರಚನೆಗಳೂ ಸ್ಥಾನ ಪಡೆದುಕೊಂಡವು. ಕಲಿಯುಗದೊಳು (ಪುರಂದರ ದಾಸರು), ವಾರವೊಂದರಿಯೆ (ಬಸವಣ್ಣ) ಮತ್ತೆ ಮತ್ತೆ ಮೆಲುಕು ಹಾಕುವಂತೆ ಮೂಡಿಬಂದವು. ‘ ಕಮಲೇ ಕಮಲಾಲಯೇ ‘ ಪ್ರಸ್ತುತಿಯಲ್ಲಿನ ಮೌನ, ಲಯವಿನ್ಯಾಸ , ವೈವಿಧ್ಯಗಳನ್ನು ಸಮರ್ಥವಾಗಿ ಅನುಸರಿಸಿದ (ಕೇಶವ ಜೋಷಿ ಬಾಗಲ್ಕೋಟ್) ಗಾಯಕರ ಮೆಚ್ಚುಗೆಗೂ ಪಾತ್ರರಾದರು. ‘ ಮಾತಾ ಭವಾನಿ’ ಯಲ್ಲಿ ‘ದುರ್ಗಾ’ ದ ಬಾಕು-ಬಳುಕುಗಳನ್ನು ತೆರೆದಿಟ್ಟ ಬಳಿಕ ಅದೇ ರಾಗದ ‘ತರಾನಾ ‘ ದ ಮೂಲಕ ವೇಗ- ವಿನ್ಯಾಸಗಳ ಸೂಕ್ಷ್ಮ ಚಿತ್ರಣ ಒದಗಿಸಲಾಯಿತು.
ಕೋರಿಕೆಯ ಭಾಗ್ಯದ ಲಕ್ಷ್ಮಿ, ಜನಪ್ರಿಯವಾಗಿರುವ ಅಕ್ಕಮಹಾದೇವಿಯವರ ವಚನ ‘ಅಕ್ಕ ಕೇಳವ್ವ’ ದ ನಂತರ ಒಂದು ಬಾರಿ ಸ್ಮರಣೆ ಸಾಲದೆ (ವಾದಿರಾಜರು) ಯೊಂದಿಗೆ ಭೈರವಿ ಹಾಡಲಾಯಿತು. ಕೊನೆಯ ಎರಡು ನಿಮಿಷಗಳಿಗೆ ಮೊದಲು ಭೈರವಿಯಲ್ಲಿ ಅರಳಿದ ಅನ್ಯಸ್ವರ ಪ್ರಯೋಗದ ಝಲಕ್ ಒಟ್ಟು ಕಚೇರಿಯ ಮುಕುಟ ಮಣಿಯಾಯಿತು. ಅಭಿಜಿತ್ ಶೆಣೈ ಕಡಂದಲೆ ತಬ್ಲಾ ಸಹವಾಹನ , ನಾಗರಾಜ್ ಶೇಟ್ ತಾಳ ಮತ್ತು ಒತ್ತು ಗಾಯನ , ಚಿನ್ಮಯ್ ಧನ್ಯ- ಚಿಂತನ ಧನ್ಯ ತಾನ್ ಪೂರ,ಉಪನ್ಯಾಸಕ ರಾಮ್ ಪ್ರಸಾದ್ ನಿರೂಪಣೆ ಮತ್ತು ಪ್ರಕಾಶ್ ಧ್ವನಿ- ಬೆಳಕಿನಲ್ಲಿ ಉತ್ತಮ ಸಹಕಾರ ನೀಡಿದರು.

ಲೇ: ಕೆ ವಿ ರಮಣ್, ಮೂಡುಬಿದ್ರಿ

Related Articles

Back to top button