ಡಾ. ಸುರೇಶ ನೆಗಳಗುಳಿ ಇವರ ಪರಿಚಯ…

ಬಂಟ್ವಾಳ ತಾಲೂಕಿನ 21 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಡಾ ಸುರೇಶ ನೆಗಳಗುಳಿ ಇವರ ಪರಿಚಯ:

ಡಾ ಸುರೇಶ ನೆಗಳಗುಳಿ, ಇವರು ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ನೆಗಳಗುಳಿ ಎಂಬಲ್ಲಿ ಶ್ರೀ ತಿಮ್ಮಣ್ಣ ಭಟ್ಟ ಮತ್ತು ಶ್ರೀ ಮತಿ ಸಾವಿತ್ರಿ ಅಮ್ಮ ಇವರ ಕೊನೆಯ ಪುತ್ರನಾಗಿ 1957 ರಂದು ಜನಿಸಿದರು.
ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹಿರಿಯ ಪ್ರಾಥಮಿಕ‌ ಶಾಲೆ ಅಡ್ಯನಡ್ಕ, ಜನತಾ ಪ್ರೌಢ ಶಾಲೆ ಅಡ್ಯನಡ್ಕ ಮತ್ತು ಪಿ ಯು ಅಭ್ಯಾಸವನ್ನು ಲೋಕ ಸೇವಾ ಸಂಸ್ಥೆಗಳು ಅಳಿಕೆಯಲ್ಲಿ ವ್ಯಾಸಂಗ ಮಾಡಿ ಆಯುರ್ವೇದ ಪದವಿಯನ್ನು ಉಡುಪಿಯಲ್ಲೂ, ಆದುನಿಕ ವೈದ್ಯ ಪದವಿ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರಿನಲ್ಲಿಯೂ ಅಭ್ಯಸಿಸಿದ್ದಲ್ಲದೆ, ಮಣಿಪಾಲದ ಎಫ ಎ ಜಿ ಇ ಎಂಬ ಫೆಲೋಶಿಪ್ ನ್ನೂ 1981 ರಲ್ಲಿ ಸಂಪಾದಿಸಿದರು.
ಪದವಿಯಲ್ಲಿ ಆರನೇ ರೇಂಕ್ ಪಡೆದ ಶ್ರೀ ಯುತರು ಭಟ್ಕಳದ ಪ್ರಸಿದ್ಧ ವೈದ್ಯ ಡಾ ಚಿತ್ತರಂಜನ್ ಹಾಗೂ ಉಡುಪಿಯ ಚರ್ಮರೋಗ ತಜ್ಞ ಡಾ ರಾಮಕೃಷ್ಣ ಆಚಾರ್ಯರಲ್ಲಿ ವಿಶೇಷ ತರಬೇತಿ ಗೊಂಡು ಅನಂತರ ಮೇರಮಜಲಿನಲ್ಲಿ ಸ್ವಂತ ಚಿಕಿತ್ಸಾಲಯವನ್ನು ನಡೆಸಿ, ತದ ನಂತರ ಕೊಪ್ಪ ದಲ್ಲಿ 10 ವರ್ಷ, ಮೂಡುಬಿದ್ರೆಯಲ್ಲಿ 15 ವರ್ಷ ಪ್ರಾಂಶುಪಾಲರಾಗಿಯೂ, ಶೋರನೂರಿನಲ್ಲಿ 5 ವರ್ಷ ಸ್ನಾತಕೋತ್ತರ ಪದವಿ ಮುಖ್ಯಸ್ಥರಾಗಿಯೂ ದುಡಿದು, ಈಗ ಮಣಿಪಾಲದ ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ವಿಭಾಗ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಲವಾರು ವೈದ್ಯಕೀಯ ಸಮ್ಮೇಳನಗಳಲ್ಲಿ ಸಂಘಟನೆ, ಪ್ರಬಂಧ ಮಂಡಿಸಿದ್ದಲ್ಲದೆ, ರಾಜೀವ ಗಾಂಧೀ ಆರೋಗ್ಯ ವಿಶ್ವ ವಿದ್ಯಾಲಯ,ಮಂಗಳೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವ ವಿದ್ಯಾಲಯ,ಗಳಲ್ಲೂ ವಿವಿಧ ಶೈಕ್ಷಣಿಕ ಹುದ್ದೆಗಳನ್ನು ನಿಭಾಯಿಸಿದ್ದರಲ್ಲದೆ ಹಲವಾರು ರಾಜ್ಯ ಅಂತಾರಾಜ್ಯ ವೈದ್ಯ ವಿದ್ಯಾರ್ಥಿಗಳ ಪರೀಕ್ಷಕರಾಗಿಯೂ ದುಡಿದಿರುತ್ತಾರೆ.
ಹಲವಾರು ವೈದ್ಯ ಲೇಖನಗಳನ್ನು ಪ್ರಕಟಿಸಿರುವ ಶ್ರೀ ಯುತರು ವೈದ್ಯಕೇತರ ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿರುತ್ತಾರೆ.
ವೈದ್ಯಕೀಯ ರಂಗದಲ್ಲಿ ಮೂಡಬಿದ್ರೆಯ ವೈದ್ಯ ಸಂಘದ ಅಧ್ಯಕ್ಷರೂ ಆಗಿದ್ದು ವೈದ್ಯ ಸನ್ಮಾನವನ್ನೂ ಹುಟ್ಟೂರಿನಲ್ಲಿ ,ಗಡಿನಾಡ ವೈದ್ಯ ರತ್ನ ಪ್ರಶಸ್ತಿ ಯನ್ನೂ ಗಳಿಸಿದ್ದಲ್ಲದೆ ,ಸಾಹಿತ್ಯ ವಲಯದಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಯುವ ಬರಹಗಾರ, ಕಾವ್ಯ ವಿಭೂಷಣ, ಕೆ ಎಸ್ ನ ರಾಜ್ಯ ಸನ್ಮಾನ, ಸ್ಪೂರ್ತಿ ರತ್ನ, ಧರ್ಮಜ್ಯೋತಿ,ಹೊಯ್ಸಳ ರಾಜ್ಯ ಪ್ರಶಸ್ತಿ,ಪ್ರಜಾರತ್ನ,ಮುಂತಾದ ಪ್ರಶಸ್ತಿಗಳನ್ನೂ ಸಂಪಾದಿಸಿರುತ್ತಾರೆ.
ಬರಹಗಾರನ ನೆಲೆಯಲ್ಲಿ ಥಟ್ಟಂತ ಹೇಳಿ ದೂರದರ್ಶನ, ಧೀರತಮ್ಮ ನ ಕಬ್ಬ, ತುಷಾರ ಬಿಂದು, ಪಡುಗಡಲ ತೆರೆಮಿಂಚು,ಗೋ ಗೀತೆ,ಮತ್ತು ನೆಗಳಗುಳಿ ಗಜಲ್ಸ್ ಎಂಬ ಕೃತಿಗಳನ್ನು ಲೋಕಾರ್ಪಣೆ ಮಾಡಿರುತ್ತಾರೆ.
ಸಾಂಘಿಕ‌ನೆಲೆಯಲ್ಲಿ ಕೊಪ್ಪ ಜೂನಿಯರ್ ಚೇಂಬರ್ ನ ಅಧ್ಯಕ್ಷನೂ, ಮೂಡಬಿದ್ರಿ ರೋಟರಿ ಸದಸ್ಯನೂ, ಕದ್ರಿಹಿಲ್ಸ್ ಲಯನ್ ಸಂಸ್ಥೆಯ ಸದಸ್ಯನೂ ,ಚುಟುಕು ಸಾಹಿತ್ಯ ಪರಿಷತ್ತು ಮಂಗಳೂರು ಇದರ ಮಾಜಿ ಅಧ್ಯಕ್ಷ ಹಾಗೂ ಹಾಲಿ ಮುಖ್ಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರೂ ಆಗಿರುತ್ತಾರೆ
ದೂರದರ್ಶನ,ಆಕಾಶವಾಣಿ ಗಳಲ್ಲಿ ಸಂವಾದ,ಕವಿ ಸಮಯ ಗಳಲ್ಲದೆ , ಉದಯವಾಣಿ ತುಷಾರ ಪರ್ಯಂತ ರಾಜ್ಯದ ಹಲವಾರು ಪತ್ರಿಕೆಗಳಲ್ಲಿ ತರಹೇವಾರಿ ಬರಹಗಳನ್ನೂ ಪ್ರಕಟಿಸಿರುತ್ರಾರೆ .
ಇದಲ್ಲದೆ ಪ್ರಸ್ತುತ ಬಹಳ ಮುಂಚೂಣಿಯಲ್ಲಿರುವ ಜಾಲತಾಣ ಸಾಹಿತ್ಯ ಬಳಗಗಳನೇಕಗಳಲ್ಲಿ ಸುಮಾರು ನೂರರಷ್ಟು ಪ್ರಶಸ್ತಿ ಹಾಗೂ ಸ್ಥಾನ ಮಾನಗಳನ್ನು ಪಡೆದಿರುತ್ತಾರೆ.
ತುಷಾರ ಚಿತ್ರಕವನಗಳಲ್ಲಿ ಅರುವತ್ತಕ್ಕೂ ಹೆಚ್ಚು ಚಿತ್ರಕವನಗಳ ವಿಜೇತ ಹಾಗೂ ಅಷ್ಟೇ ಮೆಚ್ಚುಗೆಯ ಸ್ಥಾನವನ್ನೂ ಪಡೆದುದು ಇವರ ಹೆಗ್ಗಳಿಕೆ.
ಪ್ರಸ್ತುತ ಮಂಗಳೂರು ಮಂಗಳಾ ಆಸ್ಪತ್ರೆಯಲ್ಲಿ ಮೂಲವ್ಯಾಧಿ ವಿಶೇಷ ಶಸ್ತ್ರ ಚಿಕಿತ್ಸಕರಾಗಿರುವ ಇವರು
ಪತ್ನಿ ವೈದ್ಯೆ ಡಾ ಸಾವಿತ್ರಿ, ಪುತ್ರ ಕರ್ಣಾಟಕ ಬ್ಯಾಂಕಿನ ಉದ್ಯೋಗಿ ಸುಹಾಸ ನೆಗಳಗುಳಿ, ಮತ್ತು ಸೊಸೆ ಶುಭಲಕ್ಷ್ಮಿ ಯರೊಂದಿಗೆ ಮಂಗಳೂರಿನ ಎಕ್ಕೂರು ಸಮೀಪ ತಮಗಮ‌ನಿವಾಸ “ಸುಹಾಸ” ದಲ್ಲಿ ವೈದ್ಯ ವೃತ್ತಿ ಹಾಗೂ ವಾಸ್ತವ್ಯದಲ್ಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button