ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಇನ್ನಿಲ್ಲ…

ಬೆಂಗಳೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ(104 ವ) ಅವರು ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಚ್.ಎಸ್.ದೊರೆಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮಧ್ಯಾಹ್ನ ಹೃದಯಾಘಾತದಿಂದ‌ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ದೊರೆಸ್ವಾಮಿ ಅವರಿಗೆ ಹೃದಯ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ವಯೋಸಹಜ ಸಮಸ್ಯೆಗಳು ಇದ್ದವು ಎನ್ನಲಾಗಿದೆ. ಕೆಲದಿನಗಳ ಹಿಂದೆ ಅವರಿಗೆ ಜ್ವರ, ನೆಗಡಿ ಹಾಗೂ ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆಗ ಕೊರೋನಾ ಸೋಂಕಿತರಾಗಿರುವುದು ಖಚಿತಪಟ್ಟಿತ್ತು. 7 ದಿನಗಳಲ್ಲಿ ಅವರು ಚೇತರಿಸಿಕೊಂಡು ಜಯನಗರದಲ್ಲಿರುವ ನಿವಾಸಕ್ಕೆ ತೆರಳಿದ್ದರು.
ಎಚ್​.ಎಸ್.ದೊರೆಸ್ವಾಮಿ ಅವರ ಪೂರ್ತಿ ಹೆಸರು ಹಾರೊಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ. ಏಪ್ರಿಲ್ 10, 1918ರಲ್ಲಿ ಜನಿಸಿದ್ದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬ್ರಿಟಿಷರ ಕಾಲದಲ್ಲಿ ಕನ್ನಡದದ ಜನಪ್ರಿಯ ಪತ್ರಿಕೆ ಎನಿಸಿದ್ದ ‘ಪೌರವಾಣಿ’ ವರದಿಗಾರರಾಗಿ ಜನಪ್ರಿಯರಾಗಿದ್ದರು. ಸಾಹಿತ್ಯ ಮಂದಿರದ ಮೂಲಕ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದರು.
ಕನಕಪುರ ತಾಲ್ಲೂಕು ಹಾರೋಹಳ್ಳಿ ದೊರೆಸ್ವಾಮಿ ಅವರ ಜನ್ಮಸ್ಥಳ. ಕೇವಲ 5 ವರ್ಷದವರಿದ್ದಾಗ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡರು. ವಿದ್ಯಾಭ್ಯಾಸ ಮುಗಿದ ನಂತರ ಜೂನ್ 1942ರಲ್ಲಿ ಬೆಂಗಳೂರಿನ ಪ್ರೌಢಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಅದೇ ವರ್ಷ ಆಗಸ್ಟ್​ ತಿಂಗಳಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಬ್ರಿಟಿಷರ ಆಡಳಿತಕ್ಕೆ ಧಕ್ಕೆ ತರುವ ಉದ್ದೇಶದಿಂದ ದಾಖಲೆಗಳನ್ನು ಸುಟ್ಟುಹಾಕಲೆಂದು ಪೋಸ್ಟ್​ಬಾಕ್ಸ್​ಗಳು ಮತ್ತು ರೆಕಾರ್ಡ್​ ರೂಮ್​ಗಳಲ್ಲಿ ಟೈಮ್​ಬಾಂಬ್​ಗಳನ್ನು ಸ್ಫೋಟಿಸಿದ್ದರು. ಕಾರ್ಮಿಕ ಚಳವಳಿಗಳಲ್ಲೂ ಸಕ್ರಿಯರಾಗಿ ಪಾಲ್ಗೊಂಡಿದ್ದರು.

Sponsors

Related Articles

Back to top button