ಅಗಸ, ಕ್ಷೌರಿಕರಿಗೆ ಪರಿಹಾರ: ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಮನವಿ …

ಮಂಗಳೂರು : ಅಗಸ ಮತ್ತು ಕ್ಷೌರಿಕ ಕಾರ್ಮಿಕರಿಗೆ ವಿಶೇಷ ಧನಸಹಾಯ ನೀಡುವ ನಿಟ್ಟಿನಲ್ಲಿ ಅರ್ಹರು ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಗಸ ಮತ್ತು ಕ್ಷೌರಿಕಗೆ ಪರಿಹಾರ ನೆರವು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಪಿಎಲ್ ಕಾರ್ಡ್ ಹೊಂದಿರುವ ಹೊರ ರಾಜ್ಯ ಮತ್ತು ಬೇರೆ ಜಿಲ್ಲಾ ಕಾರ್ಮಿಕರು ಸರಕಾರದ ರೂ. 5000 ನೆರವು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಫಲಾನುಭವಿಗಳು ಅರ್ಜಿ ಭರ್ತಿ ಮಾಡಿ, ಬ್ಯಾಂಕ್ ಖಾತೆಯೊಂದಿಗೆ ಜೋಡಣೆಯಾಗಿರುವ ಆಧಾರ್ ಕಾರ್ಡ್, ವಿಳಾಸ ದೃಢೀಕರಣದ ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ, ಸ್ವಯಂ ಘೋಷಣಾ ಪತ್ರ, ಉದ್ಯೋಗ ಪ್ರಮಾಣ ಪತ್ರ ಹಾಗೂ ತಮ್ಮ ಫೋಟೋ ಅಪಲೋಡ್ ಮಾಡಬೇಕು. ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಜನ ವೃತ್ತಿಯಲ್ಲಿ ತೊಡಗಿದ್ದಲ್ಲಿ ಒಬ್ಬರು ಮಾತ್ರ ಪರಿಹಾರ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದೂ ಅವರು ತಿಳಿಸಿದ್ದಾರೆ.

ಕ್ಷೌರಿಕ, ಅಗಸ ವೃತ್ತಿಯನ್ನು ನಿರ್ವಹಿಸುತ್ತಿರುವ ಕುರಿತು ಉದ್ಯೋಗ ಪ್ರಮಾಣ ಪತ್ರ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು, ಹಾಗೂ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು, ಉಪತಹಶೀಲ್ದಾರರು, ಕಂದಾಯ ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿ. ಕಾರ್ಮಿಕ ಇಲಾಖೆಯ ನಿರೀಕ್ಷಕರು, ಕಾರ್ಮಿಕ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು ಇವರ ಪೈಕಿ ಯಾವುದಾದರೊಂದು ಅಧಿಕಾರಿಯಿಂದ ದೃಢೀಕರಿಸಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವವರು ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರೀಶಿಲನೆ ನಡೆಸಿ ನಿಗದಿತ ಕಾಲಾಮಿತಿ ಒಳಗೆ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಹಾಯಕ ಕಮೀಷರ್ ಮದನ್ ಮೋಹನ್, ಕಾರ್ಮಿಕ ಇಲಾಖೆ ಅಧಿಕಾರಿ ವಿಲ್ಮಾ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.

Sponsors

Related Articles

Leave a Reply

Your email address will not be published. Required fields are marked *

Back to top button