ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನ ವಿಷಯದ ಬಗ್ಗೆ ವೆಬಿನಾರ್…

ಪುತ್ತೂರು: ಪಾಶ್ಚಾತ್ಯ ಶಿಕ್ಷಣ ನೀತಿಗಳಿಂದ ನಲುಗಿಹೋಗಿರುವ ಭಾರತೀಯ ಶಿಕ್ಷಣ ಪದ್ದತಿಯಲ್ಲಿ 34 ವರ್ಷಗಳ ನಂತರ ಆಗುತ್ತಿರುವ ಬದಲಾವಣೆಗಳು ಅತ್ಯಂತ ಸ್ವಾಗತಾರ್ಹ ಎಂದು ಮಣಿಪಾಲ ಎಂಐಟಿ ಯ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಮುಖ್ಯಸ್ಥ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಡಾ.ಕರುಣಾಕರ್ ಕೋಟೆಗಾರ್.ಎ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐಕ್ಯುಎಸಿ ಘಟಕದ ಆಶ್ರಯದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನ ಎನ್ನುವ ವಿಷಯದ ಬಗ್ಗೆ ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ ಮಾತಾಡಿದರು. ವಿದ್ಯಾರ್ಹತೆ ಎನ್ನುವುದು ಒಂದು ಪ್ರಮಾಣಪತ್ರ ಮಾತ್ರ ಈ ಪ್ರಮಾಣಪತ್ರದಿಂದ ವ್ಯಕ್ತಿಯೊಬ್ಬನ ಶಿಕ್ಷಣವನ್ನು ಅಳೆಯಲಾಗದು. ಆಮೂಲಾಗ್ರ ಬದಲಾವಣೆಯೊಂದಿಗೆ ಬಂದಿರುವ ನೂತನ ಶಿಕ್ಷಣ ನೀತಿಯ ಸರಿಯಾದ ಅನುಷ್ಠಾನದಿಂದ ಭಾರತವು ಮತ್ತೆ ವಿಶ್ವಗುರುವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. ಇದನ್ನು ವಿರೋಧಿಸುವವರು ಇದರ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸದೇ ಮಾಧ್ಯಮಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ಬರುವ ವಿಚಾರಗಳನ್ನು ನೋಡಿ ಟೀಕಿಸುತ್ತಾರೆ ಇದು ಸಲ್ಲದು . ಈ ನೀತಿಯ ಅನುಷ್ಠಾನದಿಂದ ವಿದ್ಯಾರ್ಥಿಗಳಿಗೆ ಬಹು ಆಯ್ಕೆಯ ಸವಲತ್ತುಗಳು ಲಭ್ಯವಾಗುತ್ತವೆ. ಮತ್ತು ಕಲಿತ ಪ್ರತಿಯೊಂದು ವರ್ಷಕ್ಕೂ ಒಂದೊಂದು ಸರ್ಟಿಫಿಕೇಟುಗಳು ಲಭ್ಯವಾಗುತ್ತವೆ. ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳ ಅನಾವರಣಕ್ಕೆ ಇದೊಂದು ಉತ್ತಮ ನೀತಿ ಎಂದು ಅವರು ಅಭಿಪ್ರಾಯಪಟ್ಟರು. ತಕ್ಷಣಕ್ಕೆ ಇದನ್ನು ಜಾರಿಗೆ ತರುವುದು ಸವಾಲಿನ ಕೆಲಸವಾದರೂ ಸರಿಯಾದ ಮಾರ್ಗಸೂಚಿಯಿಂದ ಇದು ಸಾಧ್ಯ ಎಂದರು.
ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಪ್ರೊ. ಸೌಮ್ಯ ಅನಿಲ್ ಅತಿಥಿಗಳನ್ನು ಪರಿಚಯಿಸಿದರು.
ಕಾಲೇಜು ಐಕ್ಯುಎಸಿ ಘಟಕದ ಸಂಯೋಜಕ ಹಾಗೂ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ.ಆನಂದ್.ವಿ.ಆರ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ.ಪ್ರಸಾದ್.ಎನ್.ಭಾಪಟ್ ವಂದಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಡಾ.ದೀಪಕ್.ಕೆ.ಬಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button