ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆ…

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಎರಡನೇ ಬಾರಿ ಅಭೂತಪೂರ್ವ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರನ್ನು ಗೌರವಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಮಾತನಾಡಿ, ಎರಡನೇ ಬಾರಿಗೆ ಶಾಸಕ‌ನಾಗಿ ಆಯ್ಕೆ ಮಾಡಲು ಅವಿರತ ಹೋರಾಟ, ಶ್ರಮವಹಿಸಿದ ಕ್ಷೇತ್ರದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಅವರು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ಅಭಿವೃದ್ಧಿ ಮೂಲಕ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
2023 ರ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ವಿರುದ್ದ ಇಲ್ಲಸಲ್ಲದ ಅಪವಾದಗಳನ್ನು ಮಾಡಿ ಗೆಲುವು ಸಾಧಿಸಿಲು ನೋಡಿದ ಕಾಂಗ್ರೇಸ್ ಗೆ ಬಂಟ್ವಾಳದಲ್ಲಿ ಜನತೆ ತಕ್ಕ ಉತ್ತರ ನೀಡಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ, ಜನರು ಮಾಡಿದ ಆಶ್ರೀರ್ವಾದಕ್ಕೆ ಯಾವುದೇ ಚ್ಯುತಿ ಬರದ ರೀತಿಯಲ್ಲಿ ಜನರ ಭಾವನೆಗಳಿಗೆ ಪೂರಕವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇನೆ ಎಂದು ಅವರು ವಿಶ್ವಾಸವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆ ಮುಗಿದ ಬಳಿಕ ನಮ್ಮ ಜವಬ್ದಾರಿ ಮುಗಿದಿಲ್ಲ, ಮುಂಬರುವ ಲೋಕ ಚುನಾವಣೆಗೆ ತಯಾರಾಗಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರು ಸಿದ್ದವಾಗಬೇಕು. ಕ್ಷೇತ್ರದ ಪ್ರತಿಯೊಂದು ಮತ ದೇಶದ ಭದ್ರತೆಯ ದೃಷ್ಟಿಯಿಂದ ಬಿಜೆಪಿಗೆ ಸಿಗುವಂತೆ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದಿದೆ ಎಂದು ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆದರೆ,ಅದನ್ನು ನೋಡಿ ಸಹಿಸಿಕೊಂಡು ಕೂರುವ ಸಂಸ್ಕ್ರತಿ ಬಿಜೆಪಿಯದ್ದಲ್ಲ.
ಅನ್ಯಾಯದ ವಿರುದ್ದ ಹೋರಾಟ ನಡೆಸಿ ನ್ಯಾಯ ಒದಗಿಸುವ ಕಾರ್ಯ ಮಾಡಲು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ,ಕಾರ್ಯಕರ್ತರ ಸಂಘಟನಾತ್ಮಕ ಮಟ್ಟದಲ್ಲಿ ಕೆಲಸ ಕಾರ್ಯಗಳು ನಡೆದ ಪರಿಣಾಮ ಉತ್ತಮ ಫಲಿತಾಂಶದ ಮೂಲಕ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದೇವೆ.
ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನೇತ್ರತ್ವದ ಬಿಜೆಪಿ ಸರಕಾರ ಆಡಳಿತ ಬರಬೇಕು ಈ ನಿಟ್ಟಿನಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ನಡೆಯುವ ಜಿ.ಪಂ.ತಾ.ಪಂ.ಮತ್ತು ಲೋಕಸಭಾ ಚುನಾವಣೆಗೆ ತಯಾರಾಗುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಪಕ್ಷದ ಸಂಘಟನಾತ್ಮಕ ಬೆಳವಣಿಗೆಯ ದೃಷ್ಟಿಯಿಂದ ಪಕ್ಷ ನೀಡಿದ ಪ್ರತಿಯೊಂದು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಹೋಗಲು ಕ್ಷೇತ್ರದ ಕಾರ್ಯಕರ್ತರು ಪೂರ್ಣವಾಗಿ ತೊಡಗಿಸಿಕೊಂಡು ಸಹಕಾರ ನೀಡುವಂತೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಮಾತನಾಡಿ, ರಾಜೇಶ್ ನಾಯ್ಕ್ ಕಳೆದ ಐದು ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ, ಕಾರ್ಯಕರ್ತರ ಜೊತೆ ಇಟ್ಟುಕೊಂಡ ಸಂಬಂಧ, ರಾಜ ಧರ್ಮದ ಆಡಳಿತ ಹೀಗೆ ಅನೇಕ ಜನಪರವಾದ ಕಾರ್ಯಕ್ರಮಗಳು ಎರಡನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿ ಇತಿಹಾಸ ನಿರ್ಮಾಣ ಮಾಡಲು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ಆದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೇಸ್ ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಕೊಡಲು ಪ್ರಾರಂಭ ಮಾಡಿದೆ. ಇದರ ವಿರುದ್ದ ಹೋರಾಟಕ್ಕೆ ಕಾರ್ಯಕರ್ತರು ಶಕ್ತಿ ನೀಡಬೇಕು.
ಹಾಗಾಗಿ ನಮ್ಮೊಳಗಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೆ ಎಲ್ಲವನ್ನು ಬದಿಗಿಟ್ಟು ಲೋಕಸಭಾ ಚುನಾವಣೆಗೆ ತಯರಾಗಿ ಎಂದು ಅವರು ತಿಳಿಸಿದರು. ವಿಧಾನ ಸಭಾ ಚುನಾವಣೆಯಲ್ಲಿ ಯಾವಯಾವ ಬೂತ್ ಗಳಲ್ಲಿ ಮತಗಳು ಕಡಿಮೆಯಾಗಿದೆ ಎಂಬುದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಪ್ರತಿಮತವನ್ನು ಬಿಜೆಪಿಗೆ ಸಿಗುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತರಾಗಿ ಪಕ್ಷದ ಅನೇಕ ಜವಬ್ದಾರಿ ವಹಿಸಿಕೊಂಡು ಆಕಸ್ಮಿಕವಾಗಿ ಇತ್ತೀಚೆಗೆ ನಿಧನರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ, ಜನಾರ್ದನ ಬಾರಿಂಜೆ, ಪ್ರವೀಣ್ ನಾಯಕ್, ನಿತಿನ್ ಅಜಿಲಮೊಗರು, ಪ್ರಶಾಂತ್ ಹೆಗ್ಡೆ,ದುರ್ಗಾಪ್ರಸಾದ ಆಚಾರ್ಯ ಅವರಿಗೆ ಶೃದ್ದಾಂಜಲಿ ಅರ್ಪಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್,ಕ್ಷೇತ್ರದ ಪಧಾನ ಕಾರ್ಯದರ್ಶಿಗಳಾದ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ರಾಮ್ ದಾಸ ಬಂಟ್ವಾಳ, ಸುಲೋಚನ ಜಿ.ಕೆ.ಭಟ್, ಮಾದವ ಮಾವೆ, ವಿಕಾಶ್ ಪುತ್ತೂರು, ಸಂದೇಶ್ ಶೆಟ್ಟಿ, ಕಮಲಾಕ್ಷಿ ಕೆ.ಪೂಜಾರಿ, ರವೀಂದ್ರ ಕಂಬಳಿ, ಸುದರ್ಶನ ಬಜ, ಮೋನಪ್ಪ ದೇವಸ್ಯ, ರಮನಾಥ ರಾಯಿ, ಚಿದಾನಂದ ರೈ ಕಕ್ಯ, ಪುರುಷೋತ್ತಮ ಶೆಟ್ಟಿ ವಾಮದಪದವು, ಚಂದ್ರಾವತಿ, ಹರ್ಷಿಣಿ ಪುಷ್ಪಾನಂದ, ಲಖಿತ ಆರ್ ರೈ, ಸೀಮಾಮಾದವ, ಕಿಶೋರ್ ಪಲ್ಲಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

whatsapp image 2023 06 06 at 3.07.04 pm
Sponsors

Related Articles

Back to top button