ಕಾಶ್ಮೀರ ವಿಚಾರದಲ್ಲಿ ಮೋದಿ ನಡೆಯಿಂದ ದೇಶದ ಘನತೆ ಹೆಚ್ಚಿದೆ-ಪ್ರೊ. ಪ್ರೇಮ ಶೇಖರ….

ಪುತ್ತೂರು : ಕಾಶ್ಮೀರ ಸಮಸ್ಯೆಯ ಇತ್ಯರ್ಥ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ದಿಟ್ಟ ನಡೆ ಪ್ರಶಂಸನೀಯ. ಈ ನಿರ್ಧಾರದಿಂದ ವಿಶ್ವಮಟ್ಟದಲ್ಲಿ ಭಾರತದ ಘನತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಶಕರು, ಅಂಕಣಕಾರರು ಆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಪ್ರೊ.ಪ್ರೇಮ ಶೇಖರ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಭೂಲೋಕದ ಸ್ವರ್ಗ ಎಂದು ಖ್ಯಾತಿ ಪಡೆದಿದ್ದ ಕಾಶ್ಮೀರ, ಇಷ್ಟೊಂದು ಸಮಸ್ಯೆಗಳಿಗೆ ಗುರಿಯಾಗಿದ್ದು ಬೇಸರದ ವಿಚಾರ. 1947ರಲ್ಲಿ ದೇಶವಿಭಜನೆಯ ಸಮಯದಲ್ಲಿ ಭಾರತದ ರಾಜಕೀಯ ನಾಯಕರ ತಪ್ಪು ನಡೆಯಿಂದಾಗಿ ಕಾಶ್ಮೀರ ಇಷ್ಟೊಂದು ಸಮಸ್ಯೆಗಳಿಗೆ ಗುರಿಯಾಗಬೇಕಾಯಿತು.ಆದರೆ 1965ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು 1971ರಲ್ಲಿ ಇಂದಿರಾ ಗಾಂಧಿ ಅವರ ಚಾಣಾಕ್ಷತೆ, ಕಾಶ್ಮೀರ ಮತ್ತಷ್ಟು ಸಮಸ್ಯೆಗಳಿಗೆ ಈಡಾಗುವುದನ್ನು ತಪ್ಪಿಸಿತು ಎಂದು ಅವರು ಹೇಳಿದರು. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಭಾರತದ ವಿದೇಶ ನೀತಿಯ ದಿಕ್ಕು ಬದಲಾಯಿತು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುವ ಪ್ರಯತ್ನವನ್ನು ಸತತವಾಗಿ ಮೋದಿ ಮಾಡಿದರು.ಇದರಿಂದ ಪಾಕಿಸ್ತಾನಕ್ಕೆ ದಿಕ್ಕು ತೋಚದಂತೆ ಆಯಿತು. ಈ ಹಂತದಲ್ಲಿ 370ನೇ ವಿಧಿ ರದ್ದು ಮಾಡುವ ಮೂಲಕ ಭಾರತ ಮತ್ತೊಮ್ಮೆ ಪ್ರಾಬಲ್ಯವನ್ನು ಸಾಧಿಸಿದೆ.ಇದು ನರೇಂದ್ರ ಮೋದಿಯ ದಿಟ್ಟ ನಾಯಕತ್ವಕ್ಕೆ ಸಾಕ್ಷಿ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಉದ್ಘಾಟಿಸಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಡಾ.ಸುಧಾ.ಎಸ್. ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕಾನೂನು ಕಾಲೇಜಿನ ಸಂಚಾಲಕ ವಿಜಯನಾರಾಯಣ ಕೆ.ಎಂ., ಕಾನೂನು ಅಧ್ಯಯನ ವಿಭಾಗದ ನಿರ್ದೇಶಕ ಡಾ. ಬಿ. ಕೆ ರವೀಂದ್ರ, ಪ್ರಾಂಶುಪಾಲೆ ಅಕ್ಷತಾ ಎ. ಪಿ ಇದ್ದರು. ಕಾನೂನು ಕಾಲೇಜಿನ ಉಪನ್ಯಾಸಕ ಕುಮಾರ್‍ಎಸ್. ಸ್ವಾಗತಿಸಿ, ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button