ತುಂಬೆ ಡ್ಯಾಮ್ – ನ್ಯಾಯೋಚಿತ ಸೂಕ್ತ ಪರಿಹಾರಕ್ಕೆ ಮನವಿ…
ಬಂಟ್ವಾಳ: ತುಂಬೆ ಡ್ಯಾಮ್ ನಲ್ಲಿ ಜಲಮಟ್ಟ ಕಾಯ್ದುಕೊಳ್ಳುವ ಬಗ್ಗೆ ಹಾಗೂ ವರತೆ ಪ್ರದೇಶಕ್ಕೆ ನ್ಯಾಯೋಚಿತ ಸೂಕ್ತ ಪರಿಹಾರವನ್ನು ಕೇಂದ್ರ ಜಲ ಆಯೋಗದ ಶಿಫಾರಸಿನ ಪ್ರಕಾರ ಒದಗಿಸುವಂತೆ ಹಾಗೂ ಮುಳುಗಡೆ ಜಮೀನಿಗೆ ಪರಿಹಾರ ನೀಡದೆ ಇರುವ ಸಂತ್ರಸ್ತ ರೈತರಿಗೆ ಕೂಡಲೇ ನ್ಯಾಯೋಚಿತ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಲಿಖಿತವಾಗಿ ಐದನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಧಾರ್ಮಿಕ ದತ್ತಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಲಾಯಿತು.
ತುಂಬೆ ಡ್ಯಾಮಿನಲ್ಲಿ 6 .30 ಮೀಟರ್ ತನಕ ನೀರು ಸಂಗ್ರಹಿಸಿದ್ದು ಇದರಿಂದ ಸಂತ್ರಸ್ತರ ಇತರ ಹೆಚ್ಚುವರಿ ಭೂಮಿ ಮುಳುಗಡೆ ಯಾಗುತ್ತಿದ್ದು, ನೀರು ಸಂಗ್ರಹಣೆಯಲ್ಲಿ ಜಲ ಮಟ್ಟವನ್ನು ಕಾಯ್ದುಕೊಳ್ಳುವಂತೆ ಇಲ್ಲವೇ ಹೆಚ್ಚುವರಿ ಮುಳುಗಡೆ ಭೂಮಿಗೆ ನ್ಯಾಯೋಚಿತ ಸೂಕ್ತ ಪರಿಹಾರವನ್ನು ಒದಗಿಸುವಂತೆ ಮನವಿಯಲ್ಲಿ ವಿವರಿಸಲಾಯಿತು. ಡ್ಯಾಮ್ ನಲ್ಲಿ ನೀರು ಸಂಗ್ರಹ ಮಾಡುವಾಗ ವರತೆ ಭೂಮಿಗೂ ಪರಿಹಾರ ಕೊಡಬೇಕೆಂಬ ಕೇಂದ್ರ ಜಲ ಆಯೋಗದ ನಿರ್ದೇಶನವನ್ನು ತುಂಬೆ ಡ್ಯಾಂನಲ್ಲಿ ನೀರು ಸಂಗ್ರಹಿಸುವಾಗ ಪಾಲಿಸದೆ ಇರುವುದರ ಬಗ್ಗೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಮುಳುಗಡೆ ಭೂಮಿಯ ಸಂತ್ರಸ್ತರು ಮುಳುಗಡೆ ಜಮೀನಿಗೆ ಪರಿಹಾರ ದೊರೆಯದೆ ಇರುವುದರ ಬಗ್ಗೆ ಲಿಖಿತವಾಗಿ ನಗರಪಾಲಿಕೆಗೆ ಅರ್ಜಿ ಸಲ್ಲಿಸಿದರು. ಮುಳುಗಡೆ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲ ಎಂಬ ಸಬೂಬನ್ನು ನೀಡಿ ರೈತರಿಗೆ ಆಗುವ ಅನ್ಯಾಯವನ್ನು ಮನವಿಯಲ್ಲಿ ವಿವರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಪಟ್ಟವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದು ರೈತರ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎಂ ಸುಬ್ರಹ್ಮಣ್ಯ ಭಟ್ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ ಇಂದು ಲಿಖಿತ ಮನವಿ ನೀಡಿದರು.
ತುಂಬೆ ಡ್ಯಾಂ ಮುಳುಗಡೆ ಜಮೀನಿನ ವ್ಯಾಪ್ತಿಯಲ್ಲಿ ಸಜೀಪಮುನ್ನೂರು, ನರಿಕೊಂಬು, ಬಿ ಮೂಡ ,ಪಾಣೆಮಂಗಳೂರು,ಕಳ್ಳಿಗೆ ಗ್ರಾಮಗಳಲ್ಲಿ ರೈತರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಡ್ರೋನ್ ಮೂಲಕ ಸರ್ವೆ ಮಾಡಿ, ಸರ್ವೆ ನಿರತರಲ್ಲಿ ರೈತರು ಪ್ರಶ್ನೆ ಮಾಡಿದಾಗ ಉಡಾಫೆ ಮಾತುಗಳ ಉತ್ತರ ನೀಡಿ ಅಲ್ಲಲ್ಲಿ ಗುರುತುಗಳನ್ನು ಮಾಡಿರುತ್ತಾರೆ. ಇದರಿಂದ ರೈತರು ಆತಂಕ ಹಾಗೂ ಗೊಂದಲಕ್ಕೊಳಗಾಗಿದ್ದು, ಸರ್ವೆಯ ಬಗ್ಗೆ ರೈತರಿಗೆ ಪೂರ್ಣ ಮಾಹಿತಿಯನ್ನು ಒದಗಿಸುವಂತೆ ಹಾಗೂ ರೈತರ ಹಿತಾಸಕ್ತಿ ಕಾಪಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.