ಮಳೆಹಾನಿ – ಕೊಡಗಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ಟಿ.ಎಂ.ಶಾಹಿದ್ ಒತ್ತಾಯ…
ಮಡಿಕೇರಿ : ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಉಂಟಾದ ಹಾನಿಯನ್ನು ಪರಿಗಣಿಸಿ ಸರ್ಕಾರ ವಿಶೇಷ ಪ್ಯಾಕೇಜ್‍ನಡಿ ಶಾಶ್ವತ ಪರಿಹಾರವನ್ನು ಘೋಷಿಸಬೇಕೆಂದು ಕಾಂಗ್ರೆಸ್ ಮುಖಂಡ ಟಿ.ಎಂ.ಶಾಹೀದ್ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಕಳೆದ ಮೂರು ವರ್ಷಗಳಿಂದಲೂ ಭೂ ಕುಸಿತ ಸಂಭವಿಸಿ ಅನೇಕ ಕಡೆ ಹಾನಿ ಸಂಭವಿಸಿದೆ. ಇದರಿಂದಾಗಿ ಕೊಡಗಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಆತಂಕದಲ್ಲೇ ದಿನ ಕಳೆಯುವಂತಾಗಿದೆ.ಮಳೆಯಿಂದಾಗಿ ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಅನೇಕ ಮಂದಿ ತಮ್ಮ ಮನೆ, ಗದ್ದೆ, ತೋಟಗಳನ್ನು ಕಳೆದುಕೊಂಡಿದ್ದಾರೆ. ನದಿಗಳು ಮತ್ತು ಹೊಳೆಗಳು ಉಕ್ಕಿ ಹರಿಯುತ್ತಿದ್ದು, ಕೃಷಿಯಲ್ಲಿ ಹಾನಿ ಸಂಭವಿಸಿದೆ. ಭಾಗಮಂಡಲದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಅರ್ಚಕರ ಕುಟುಂಬ ನಾಪತ್ತೆಯಾಗಿದ್ದಾರೆ. ಜಿಲ್ಲೆಯ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಸ್ಥಳೀಯ ಮುಖಂಡರು, ಕಾರ್ಯಕರ್ತರು, ಆರೋಗ್ಯ ಹಸ್ತದ ಯೋಧರು ಜನರ ರಕ್ಷಣೆಗೆ ನಿಂತಿದ್ದು, ಜನರ ಹಿತಕ್ಕಾಗಿ ಹೆಚ್ಚಿನ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆದ್ದರಿಂದ ಸರಕಾರ ಶೀಘ್ರವಾಗಿ ಕಾರ್ಯೋನ್ಮುಖರಾಗಿ ಅಪಾಯದ ಅಂಚಿನಲ್ಲಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು, ಸಾವಿಗೀಡಾದ ಜನರ ಮತ್ತು ಹಾನಿಯಾದ ಮನೆಗಳ ವಿವರವನ್ನು ಕಲೆ ಹಾಕಲು ಕೂಡಲೇ ಅಧಿಕಾರಿಗಳ ತಂಡವನ್ನು ರಚಿಸಬೇಕು, ಜನರಿಗೆ ಅವಶ್ಯಕವಾದ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ ಅವರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವಂತಾಗಬೇಕು.ಪ್ರಾಣ ಹಾನಿ ಸಂಭವಿಸಿದ ಕುಟುಂಬಗಳಿಗೆ ತಲಾ 25 ಲಕ್ಷ ರೂ. ನೀಡಬೇಕು ಮತ್ತು ಮನೆಗಳನ್ನು ಕಳೆದುಕೊಂಡವರಿಗೆ ತಲಾ 10 ಲಕ್ಷ ರೂ. ನೀಡಬೇಕು, ಕೃಷಿ ಹಾನಿ ಸಂಭವಿಸಿದ ಭೂಮಿಗೆ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು, ಮನೆ ಕಳೆದು ಕೊಂಡವರಿಗೆ ಪುರ್ನವಸತಿಯ ಸೌಲಭ್ಯವನ್ನು ಶೀಘ್ರದಲ್ಲಿ ನಿರ್ಮಿಸಿಕೊಡಬೇಕು ಮತ್ತು ಪ್ರತೀ ಗ್ರಾಮ ಪಂಚಾಯತಿಗೆ ಹಣವನ್ನು ಬಿಡುಗಡೆ ಮಾಡಬೇಕು.
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಕಷ್ಟ, ನಷ್ಟ ಸಂಭವಿಸಿದ್ದು, ಮಳೆಗಾಲ ಮುಂಚಿತವಾಗಿ ಮುನ್ನೆಚ್ಚರಿಕಾ ಕ್ರಮವನ್ನು ಸರಕಾರವಾಗಲಿ, ಜನ ಪ್ರತಿನಿಧಿಯಾಗಲಿ ಮಾಡದೇ ಇದ್ದುದರಿಂದ ಇಂತಹ ಅನಾಹುತಗಳು ಮರುಕಳಿಸುತ್ತಿದ್ದು, ಶಾಶ್ವತ ಪರಿಹಾರವನ್ನು ಕಲ್ಪಿಸಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.