ಹೊಸಬೆಟ್ಟು – ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಶ್ರೀಪುತ್ತಿಗೆ ಮಠಕ್ಕೆ ಹಸ್ತಾಂತರ….
ಸುರತ್ಕಲ್: ಕಳೆದ 24 ವರ್ಷಗಳಿಂದ ಹೊಸಬೆಟ್ಟುನಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿ ಮಠದ ಆಡಳಿತವನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀಪುತ್ತಿಗೆ ಮಠಕ್ಕೆ ಗುರುವಾರ ಹಸ್ತಾಂತರಿಸಲಾಯಿತು.
ಹೊಸಬೆಟ್ಟು ರಾಘವೇಂದ್ರ ಮಠದ ನವ ವೃಂದಾವನ ಸೇವಾ ಪ್ರತಿಷ್ಠಾನದ ವತಿಯಿಂದ ಮಠದಲ್ಲಿ ಆಯೋಜಿಸಲಾಗಿದ್ದ ಗುರು ಸಮರ್ಪಣಾ ಸಮಾರಂಭದಲ್ಲಿ ಮಠದ ಸ್ಥಾಪಕರಾಗಿರುವ ಹರಿದಾಸ ರತ್ನ ಹೊಸಬೆಟ್ಟು ದಿ. ವಾದೀಶ ಆಚಾರ್ಯರ ಇಚ್ಛೆಯಂತೆ ಅವರ ಮಗ ರಾಘವೇಂದ್ರ ಆಚಾರ್ಯ ಶ್ರೀಮಠವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಭಜನಾಮೃತ ಸಿ.ಡಿ.ಯನ್ನು ಅನಾವರಣಗೊಳಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್, ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕರ್ನಾಟಕ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಮಂಗಳೂರು ಮಹಾನಗರಪಾಲಿಕೆ ಉಪ ಮೇಯರ್ ವೇದಾವತಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ, ಹೊಸಬೆಟ್ಟು ವಾರ್ಡ್ ಕಾರ್ಪೊರೇಟರ್ ವರುಣ್ ಚೌಟ ಹಾಗೂ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.