ಸುದ್ದಿ

ಒತ್ತಡಕ್ಕೆ ಮಣಿದು ಮಂಗಳೂರು ವಿ.ವಿ.ಯು ಅಂತರಾಷ್ಟ್ರೀಯ ತುಳುಗೋಷ್ಠಿಯನ್ನು ರದ್ದುಗೊಳಿಸಿರುವುದು ಮೂರ್ಖತನದ ಪರಮಾವಧಿಯಾಗಿದೆ – ಶೌವಾದ್ ಗೂನಡ್ಕ…

ಮಂಗಳೂರು: ದೆಹಲಿಯ ಜೆ.ಎನ್.ಯು.ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರನ್ನು ಮಂಗಳೂರು ವಿ.ವಿ.ಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ತುಳು ಗೋಷ್ಠಿಗೆ ಆಹ್ವಾನಿಸಿದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಸದಸ್ಯರೋರ್ವರು ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ತುಳು ಗೋಷ್ಠಿಯನ್ನು ರದ್ದುಗೊಳಿಸಿರುವುದು ಸರಿಯಲ್ಲ, ಇದು ಮೂರ್ಖತನದ ಪರಮಾವಧಿಯಾಗಿದೆ ಎಂದು ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರಾಜಕೀಯೇತರ ಕಾರ್ಯಕ್ರಮಗಳು ಎಲ್ಲರನ್ನೂ ಒಗ್ಗೂಡಿಸಿ ನಡೆಯುವಂತಹದ್ದು, ಪುರುಷೋತ್ತಮ ಬಿಳಿಮಲೆಯವರು ದ.ಕ.ಜಿಲ್ಲೆಯ ಸುಳ್ಯದವರಾಗಿ ದೂರದ ದೆಹಲಿಯಲ್ಲಿ ಇದ್ದುಕೊಂಡು ತುಳುಭಾಷೆಯ ಏಳಿಗೆಗಾಗಿ ದುಡಿದಿದ್ದಾರೆ.ಆ ಹಿನ್ನೆಲೆಯಲ್ಲಿ ಮಂಗಳೂರು ವಿ.ವಿ.ಯ ಸಹಭಾಗಿತ್ವದೊಂದಿಗೆ ಹಲವು ತುಳು ಸಂಘಟನೆಗಳ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಗಿದೆ.ಇದೀಗ ಯಾರದ್ದೋ ಒತ್ತಡಕ್ಕೆ ಮಣಿದು ಮಂಗಳೂರು ವಿ.ವಿ.ಯು ನವೆಂಬರ್ 1 ರಂದು ನಡೆಯಬೇಕಿದ್ದ ತುಳುಗೋಷ್ಠಿಯನ್ನು ರದ್ದುಗೊಳಿಸಿರುವುದು ವಿ.ವಿ.ಯು ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅನುಮಾನಕ್ಕೆ ಪುಷ್ಠಿಯನ್ನು ನೀಡುವಂತಿದೆ. ಮಂಗಳೂರು ವಿ.ವಿ.ಯ ಕಾರ್ಯಕ್ರಮಗಳು ಒಂದು ಪಕ್ಷದ ಅನುಮತಿಯ ಮೇರೆಗೆ ನಡೆಯಬಾರದು ರದ್ದುಗೊಂಡಿರುವ ತುಳುಗೋಷ್ಠಿಯನ್ನು ತಕ್ಷಣವೇ ಪುನಃ ಆಯೋಜಿಸುವಂತೆ ಕೆ.ಪಿ.ಸಿ.ಸಿ.ಮಾಧ್ಯಮ ವಕ್ತಾರರಾದ ಶೌವಾದ್ ಗೂನಡ್ಕರವರು ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published.

Back to top button