ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಕೇಂದ್ರ ಸಚಿವ ಸದಾನಂದ ಗೌಡ ಭೇಟಿ…

ಪುತ್ತೂರು: ಕೇಂದ್ರ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಡಿ.ವಿ.ಸದಾನಂದ ಗೌಡ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಗೆ ಭೇಟಿ ನೀಡಿ ಕಾಲೇಜಿನ ಬೆಳವಣಿಗೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು.
ಕಾಲೇಜಿನ ವಿವಿಧ ಸವಲತ್ತುಗಳ ಬಗ್ಗೆ ಮತ್ತು ವಿದ್ಯಾರ್ಥಿಗಳ ಪ್ರಾಜೆಕ್ಟ್ ಗಳ ಬಗ್ಗೆ ತಿಳಿದುಕೊಂಡ ಅವರು ಕೇಂದ್ರ ಸರ್ಕಾರವು ಸ್ಕಿಲ್ ಇಂಡಿಯಾ ಯೋಜನೆಗೆ ಸಾಕಷ್ಟು ಅವಕಾಶವನ್ನು ನೀಡುತ್ತಿದ್ದು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಇದನ್ನು ಬಳಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ತೊಂದರೆಯಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಕಾಲೇಜುಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ರಾಜ್ಯ ಸರ್ಕಾರಗಳು ಸೂಕ್ತ ನಿರ್ಧಾರವನ್ನು ಕೈಗೊಳ್ಳುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಮ್ಮ ಖಾತೆಯ ಕಾರ್ಯಯೋಜನೆಯ ಬಗ್ಗೆ ಮಾಹಿತಿ ನೀಡಿದ ಅವರು ದೇಶದ ಯಾವುದೇ ಮೂಲೆಯಲ್ಲಿ ರಸಗೊಬ್ಬರದ ಕೊರತೆಯಾಗದಂತೆ ಗರಿಷ್ಠ ಎಚ್ಚರ ವಹಿಸಲಾಗಿದೆ. ಅಲ್ಲಿನ ರೈತರ ಬೇಡಿಕೆಗಿಂತ 40% ಹೆಚ್ಚು ಸಂಗ್ರಹ ಇರುವಂತೆ ರಸಗೊಬ್ಬರಗಳ ಪೂರೈಕೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆವಶ್ಯಕತೆಗೆ ತಕ್ಕಂತೆ ಉತ್ಪಾದನೆ ಮಾಡುವುದು ಒಂದು ಸವಾಲಿನ ಕೆಲಸವಾಗಿತ್ತು . ಸಾವಯವ ಗೊಬ್ಬರಗಳ ಬಗ್ಗೆ ರೈತರಿಗೆ ಒಲವು ಮೂಡುವಂತೆ ಮಾಡಲು ಸಾಕಷ್ಟು ಮಾಹಿತಿಗಳನ್ನು ಹಂಚಲಾಗಿದೆ. ರಸಗೊಬ್ಬರಗಳ ಸುಗಮ ಪೂರೈಕೆಗಾಗಿ ಆಪ್ ಆಧಾರಿತ ವಿತರಣಾ ವ್ಯವಸ್ಥೆ ಮತ್ತು ಆಧಾರ್ ಕಾರ್ಡ್ ಆಧಾರಿತ ಹಂಚಿಕೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ರಸಗೊಬ್ಬರದ ಕೊರತೆಯಾಗದಂತೆ ಕಾಳಸಂತೆ ಮಾರಾಟ ಮತ್ತು ದಾಸ್ತಾನು ಮಳಿಗೆಗಳ ಮೇಲೆ ದಾಳಿ ನಡೆಸಿ ಲೈಸನ್ ರದ್ದತಿಯಂತ ಕ್ರಮಗಳನ್ನು ಕೈಗೊಳ್ಳಲಾಗಿದೆ . ಒಂದು ಲಕ್ಷದ ಮೂರು ಸಾವಿರ ಕೋಟಿ ರೂಪಾಯಿ ಸಬ್ಸಿಡಿಯನ್ನು ವಿತರಿಸಲಾಗಿದೆ ಎಂದರು.

ರೈತರಿಗೆ ಅತ್ಯಗತ್ಯವಾಗಿರುವ ಮಣ್ಣು ಪರೀಕ್ಷಾ ಕೇಂದ್ರವನ್ನು ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಆಶ್ರಯದಲ್ಲಿ ಸ್ಥಾಪಿಸುವ ಬಗ್ಗೆ ಯೋಜನಾ ವರದಿಯನ್ನು ಸಚಿವರಿಗೆ ಸಲ್ಲಿಸಲಾಯಿತು. ಇದೊಂದು ಮಣ್ಣು ಪರೀಕ್ಷೆಯ ವರದಿಯ ಆಧಾರದಲ್ಲಿ ಎಷ್ಟು ರಸಗೊಬ್ಬರಗಳನ್ನು ಮತ್ತು ನೀರನ್ನು ನೀಡಬೇಕೆಂದು ಮಾಹಿತಿ ನೀಡುವ ಬಹುಪಯೋಗಿ ಯೋಜನೆಯಾಗಿದೆ. ಇದರ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು ಇದೊಂದು ಉತ್ತಮವಾದ ಯೋಜನೆ ಇದರಿಂದ ರೈತರಿಗೆ ಸಾಕಷ್ಟು ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ ಎಂದರು. ರಾಜ್ಯಸರ್ಕಾರದ ಜತೆಸೇರಿ ರೈತರಿಗೆ ಮಣ್ಣು ಪರೀಕ್ಷೆಯ ಅಧಿಕೃತ ಕಾರ್ಡ್ ನೀಡುವಂತೆ ಮಾಡುವ ಬಗ್ಗೆ ಬೇಕಾದ ಸಹಕಾರವನ್ನು ನೀಡುವುದಾಗಿ ಅವರು ಹೇಳಿದರು. ಮೆಕ್ಯಾನಿಕಲ್ ವಿಭಾಗದ ವತಿಯಿಂದಲೂ ಕೃಷಿ ಉಪಕರಣಗಳ ಅಭಿವೃದ್ಧಿ ಮತ್ತು ತಯಾರಿಗೆ ಬೇಕಾದ ಉಪಕರಣಗಳನ್ನು ಹೊಂದಿಸುವ ಬಗ್ಗೆಯೂ ಯೋಜನಾ ವರದಿಯನ್ನು ಮಂಡಿಸಲಾಯಿತು.

ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ವಿಧಾನಪರಿಷತ್ತಿನ ಸದಸ್ಯ ಪ್ರತಾಪ್‍ಸಿಂಹ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಿರ್ದೇಶಕರಾದ ನಾ.ಸೀತಾರಾಮ, ವಾಮನ ಪೈ, ಸದಸ್ಯರಾದ ಎಸ್.ಆರ್.ರಂಗಮೂರ್ತಿ, ಆರ್‍ಎಸ್‍ಎಸ್‍ನ ಅಖಿಲ ಭಾರತ ಕುಟುಂಬ ಪ್ರಬೋಧನಾ ಪ್ರಮುಖ್ ಕಜಂಪಾಡಿ ಸುಬ್ರಮಣ್ಯ ಭಟ್, ಪುತ್ತೂರು ತಾಲೂಕು ಬಿಜೆಪಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿ ಅಶೋಕ್ ರೈ ಕೊಡಿಂಬಾಡಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಟಿ.ಎಸ್.ಸುಬ್ರಮಣ್ಯ ಭಟ್, ಅಚ್ಯುತ ಪ್ರಭು, ವಿವೇಕಾನಂದ ವಿದ್ಯಾರ್ಥಿ ನಿಲಯಗಳ ಕಾರ್ಯದರ್ಶಿ ಅಚ್ಯುತ ನಾಯಕ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಭಾಸ್ಕರ್, ವಿದ್ಯಾರ್ಥಿ ನಿಲಯಗಳ ಆಡಳಿತಾಧಿಕಾರಿ ಲಕ್ಷ್ಮೀಪ್ರಸಾದ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ವಿಭಾಗ ಮುಖ್ಯಸ್ಥರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಸ್ವಾಗತಿಸಿದರು.

 

Sponsors

Related Articles

Leave a Reply

Your email address will not be published. Required fields are marked *

Back to top button