ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಫ್ಯಾಕಲ್ಟಿ ಡೆವೆಲಪ್ ಮೆಂಟ್ ಪ್ರೋಗ್ರಾಮ್…

ಪುತ್ತೂರು: ದಿನ ದಿನವೂ ತಂತ್ರಜ್ಞಾನಗಳು ಬದಲಾಗುತ್ತಲೇ ಹೋಗುತ್ತವೆ. ಪ್ರಸಕ್ತ ಬೆಳವಣಿಗೆಗಳಿಗೆ ಸ್ಪಂದಿಸದೇ ಹೋದರೆ ನಾವು ಹಿಂದುಳಿಯುತ್ತೇವೆ. ಹಾಗಾಗಿ ಮೊದಲು ನಮ್ಮನ್ನು ನಾವು ಉನ್ನತೀಕರಿಸಿಕೊಂಡು ನಂತರ ಅದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯದಲ್ಲಿ ನಿರತರಾಗಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಹೇಳಿದರು.
ಅವರು ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಿಗೆ ನ್ಯಾಕ್ ಮಾನ್ಯತೆಯ ಅಗತ್ಯತೆ ಎನ್ನುವ 3 ದಿನಗಳ ಉಪನ್ಯಾಸಕರ ಉತ್ತೇಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉನ್ನತ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯಗಳು, ಕಾರ್ಪೊರೇಟ್ ಜಗತ್ತಿನ ಕಂಪೆನಿಗಳು ನ್ಯಾಕ್ ಅಥವಾ ಎನ್‍ಬಿಎ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುತ್ತವೆ. ಹಾಗಾಗಿ ಮಾನ್ಯತೆ ಗಳಿಸುವುದು ಅನಿವಾರ್ಯ, ಇದನ್ನು ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಆಧ್ಯಕ್ಷ .ಸತೀಶ್ ರಾವ್.ಪಿ ಮಾತನಾಡಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ ಪ್ರಾರಂಭವಾದ ಸಂಸ್ಥೆಯು ಯಾವುದೇ ರಾಜಿಯಿಲ್ಲದೆ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡೇ ಬಂದಿದೆ. ಅದಕ್ಕೆ ಬೇಕಾದ ಪೂರಕ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಅದರ ಅಂಗವಾಗಿ ಈ ಕಾರ್ಯಕ್ರಮವೂ ನಡೆಯುತ್ತಿದೆ ಎಂದರು. ನ್ಯಾಕ್ ಮಾನ್ಯತೆಯನ್ನು ಗರಿಷ್ಟ ಶ್ರೇಯಾಂಕದಲ್ಲಿ ಪಡೆಯುವುದಕ್ಕೆ ಎಲ್ಲ ಉಪನ್ಯಾಸಕರು ಸಹಕರಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ದೀಪಕ್.ಕೆ.ಬಿ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಪ್ರೊ. ಕೃಷ್ಣಮೋಹನ್.ಎ.ಜೆ ವಂದಿಸಿದರು. ಪ್ರೊ. ಶ್ವೇತಾಂಬಿಕಾ.ಪಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button