ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್ (RETE) ಯೋಜನೆಗೆ ಆಯ್ಕೆ…
ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್ (RETE) ಯೋಜನೆಗೆ ಆಯ್ಕೆಯಾಗಿದೆ.
ರಾಜ್ಯದ ಪ್ರತಿ ಜಿಲ್ಲೆಯ ಒಂದೊಂದು ಎಂಜಿನಿಯರಿಂಗ್ ಕಾಲೇಜುಗಳನ್ನು ಐದು ವರ್ಷಗಳಲ್ಲಿ ಅತ್ಯುತ್ಕೃಷ್ಟವಾಗಿ ಅಭಿವೃದ್ದಿಪಡಿಸುವ ಯೋಜನೆ ಇದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯು ಆಯ್ಕೆಗೊಂಡಿದೆ. ಇನ್ಕ್ಯುಬೇಷನ್, ಆಕ್ಸಲರೇಟರ್ ಮತ್ತು ಸೂಪರ್-30 ಎನ್ನುವ 3 ವಿಭಾಗಗಳಲ್ಲಿ ಈ ಕಾಲೇಜನ್ನು ಪರಿಗಣಿಸಲಾಗಿದೆ.
ವಿದ್ಯಾರ್ಥಿಗಳಿಗೆ ತಮ್ಮ ಜಿಲ್ಲೆಗಳಲ್ಲೇ ಅತ್ಯುತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಒದಗಿಸುವುದು ಸರ್ಕಾರದ ಗುರಿಯಾಗಿದೆ. ಅದಕ್ಕಾಗಿ ಉನ್ನತ ಶಿಕ್ಷಣ ಸಚಿವಾಲಯವು ರೂಪು ರೇಷಗಳನ್ನು ಸಿದ್ದಪಡಿಸಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕರಿಸಿದ್ದಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿ ಹಾಗೂ ನವ್ಯೋದ್ಯಮ ವಿಷನ್ ಗ್ರೂಪ್ನ ಮುಖ್ಯಸ್ಥರ ನೇತೃತ್ವದ ಉಪಸಮಿತಿಗಳನ್ನು ನೇಮಿಸಿತ್ತು. ಈ ಸಮಿತಿಗಳು ಕಾಲೇಜನ್ನು ಗುರುತಿಸಿ ಆಯ್ಕೆ ಮಾಡಿವೆ. ‘
ಜಾಗತಿಕ ಅಗತ್ಯತೆಗಳಿಗೆ ಅನುಗುಣವಾಗಿ ಐಐಟಿ ದರ್ಜೆಗೆ ಕಾಲೇಜುಗಳನ್ನು ಉನ್ನತೀಕರಿಸುವ ಯೋಜನೆ ಇದಾಗಿದ್ದು, ವಿದ್ಯಾರ್ಥಿ ಕೇಂದ್ರಿತ ಕೌಶಲ ಮತ್ತು ತಾಂತ್ರಿಕ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಸಂಶೋಧನೆಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡುವುದರ ಜತೆಯಲ್ಲಿ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ. ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದಲ್ಲಿ ಉದ್ಯೋಗಗಳಿಗೆ ಅರ್ಹರಾಗುವಂತೆ ಮಾಡುವುದರ ಜತೆಯಲ್ಲಿ ಉದ್ಯಮಶೀಲತೆಯನ್ನೂ ಬೆಳೆಸಲಾಗುತ್ತದೆ. ಗುಣಮಟ್ಟದ ಇಂಟರ್ನ್ಶಿಪ್, ಪ್ಲೇಸ್ಮೆಂಟ್ ಹಾಗೂ ಆಯಾ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಾಜೆಕ್ಟ್ ಗಳ ತಯಾರಿಗೆ ಆದ್ಯತೆಯನ್ನು ನೀಡಲಾಗುತ್ತದೆ.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕರಿಸಿದ್ದಪ್ಪ ಹಾಗೂ ಉಪಸಮಿತಿಗಳ ಸದಸ್ಯರಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.