ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ವಿ ವಿ ಭಟ್ ಅವರಿಗೆ ನುಡಿನಮನ…

ಪುತ್ತೂರು: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶಕ ಮಂಡಳಿಯ ಸದಸ್ಯರು, ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರೂ ಆಗಿದ್ದ ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿಗಳಾದ ವಿ ವಿ ಭಟ್ ಅವರು ಧೈವಾದೀನರಾಗಿದ್ದು, ಅವರಿಗೆ ನುಡಿನಮನ ಕಾರ್ಯಕ್ರಮವನ್ನು ಇಂಜಿನಿಯರಿಂಗ್ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಏರ್ಪಡಿಸಲಾಯಿತು.
ವಿ ವಿ ಭಟ್ ಅವರ ಆತ್ಮೀಯ ಗೆಳೆಯ, ಸಹಪಾಠಿ ಸುಭಾಶ್ಚಂದ್ರ ಜೈನ್ ಅವರು ಮಾತನಾಡಿ ಕಲಿಕೆಯಲ್ಲಿ ಪ್ರತಿಭಾವಂತರಾಗಿದ್ದ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ರಾಂಕ್ ವಿಜೇತರಾಗಿದ್ದರು. ಐಎಎಸ್ ಅಧಿಕಾರಿಗಳಾಗಿದ್ದರೂ ಅತ್ಯಂತ ಸರಳ ಸಜ್ಜನ ವ್ಯಕ್ತಿಯಾಗಿದ್ದರು ಎಂದರು. ತಾನು ಕಲಿತ ವಿದ್ಯಾಸಂಸ್ಥೆ ಮತ್ತು ಸಹಸಂಸ್ಥೆಗಳ ಬಗ್ಗೆ ಅಪಾರ ಆಸ್ಥೆಯನ್ನು ಹೊಂದಿದ್ದ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡುದಕ್ಕಾಗಿ ಸದಾ ಸನ್ನದ್ಧರಾಗಿರುತ್ತಿದ್ದರು ಎಂದರು. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ ಎಂದು ಅವರು ಪ್ರಾರ್ಥಿಸಿದರು.
ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್ ಮಾತನಾಡಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾದಂದಿನಿಂದ ಇಂದಿನವರೆಗೆ ತಮ್ಮ ಅಮೂಲ್ಯ ಸಲಹೆ ಸೂಚನೆಗಳ ಮೂಲಕ ಕಾಲೇಜಿನ ಏಳಿಗೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮುಖ್ಯ ಕಾರ್ಯದರ್ಶಿಗಳಾಗಿದ್ದರೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಮತ್ತು ಎಲ್ಲರೊಂದಿಗೂ ಬೆರೆಯುವ ನಿಗರ್ವಿಯಾಗಿದ್ದರು. ತನ್ನಲ್ಲಿರುವ ತಾಂತ್ರಿಕ ಆಲೋಚನೆಗಳನ್ನು ಇಂಜಿನಿಯರಿಂಗ್ ಕಾಲೇಜಿನ ಮೂಲಕ ಸಮಾಜಕ್ಕೆ ತಲಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದರು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ ಕೆ ಇಂಜಿನಿಯರಿಂಗ್ ಕಾಲೇಜಿನ ಏಳಿಗೆಗೆ ವಿ ವಿ ಭಟ್ ಅವರ ಕೊಡುಗೆ ಅನನ್ಯವಾದದ್ದು. ವಿಶ್ವೇಶ್ವರಯ್ಯ ಸೆಂಟರ್ ಫಾರ್ ರೀಸರ್ಚ್ ಸ್ಟಡೀಸ್‍ನ ಸ್ಥಾಪನೆ, ಬಾಬಾ ಅಟೋಮಿಕ್ ರೀಸರ್ಚ್ ಸೆಂಟರಿನೊಂದಿಗೆ ತಾಂತ್ರಿಕತೆಯ ವಿನಿಮಯದ ಒಪ್ಪಂದ, ಇಸ್ರೋ ಸಂಸ್ಥೆಯ ಪ್ರಖ್ಯಾತ ವಿಜ್ಞಾನಿಗಳ ಕಾಲೇಜು ಭೇಟಿ ಮುಂತಾದವು ಅವರು ನೀಡಿದ ಕೊಡುಗೆಗಳಾಗಿವೆ. ಸ್ವತಹ ಕೃಷಿಕರಾಗಿದ್ದ ಅವರು ಕೃಷಿ ಸಂಬಂದೀ ಸಮಸ್ಯೆಗಳಿಗೆ ಯಾಂತ್ರೀಕೃತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದರು. ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಮೃತರ ಗೌರವಾರ್ಥ ಮೌನ ಪ್ರಾರ್ಥನೆಯನ್ನು ಮಾಡಿ ಪುಷ್ಪಾಂಜಲಿಯನ್ನು ಸಮರ್ಪಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ರವಿಕೃಷ್ಣ ಡಿ ಕಲ್ಲಾಜೆ, ಸುಬ್ರಮಣ್ಯ ಭಟ್ ಟಿ.ಎಸ್., ಅಚ್ಯುತ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button