ಪುತ್ತೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ…..

ಪುತ್ತೂರು: ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಯುವ ಸಮುದಾಯಕ್ಕೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಶಾಲಾ ಕಾಲೇಜು ಸೇರಿದಂತೆ ವಿವಿಧ ಸ್ಥಳಗಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುತ್ತೂರು ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆರೋಗ್ಯ ಇಲಾಖೆ ಆಶ್ರಯದಲ್ಲಿ ಪುತ್ತೂರು ತಾಲೂಕು ಆರೋಗ್ಯ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸಂಖ್ಯಾ ವಿಚಾರಗಳು ಯುವಜನತೆಗೆ ನೀಡುವ ಕೆಲಸ ನಡೆಯಬೇಕು. ಕೇವಲ ಅಧಿಕಾರಿಗಳು, ಆಶಾಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರೆ ದೊಡ್ಡ ಪ್ರಯೋಜನವಾಗುವುದಿಲ್ಲ ಎಂದ ಅವರು ಭಾರತ ಪ್ರಸ್ತುತ ಅಬಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ವಿಶ್ವದ ಹಲವು ದೇಶಗಳು ಭಾರತದ ಯೋಜನೆಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಮುಂದಾಗಿವೆ. ಹಾಗಾಗಿ ವಿಶ್ವಕ್ಕೆ ಮಾದರಿಯಾಗುವ ಹಂತದಲ್ಲಿ ಭಾರತವಿದೆ ಎಂದು ಶಾಲಾ ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಮಾತನಾಡಿ, ಜನಸಂಖ್ಯೆ ಏರುವಿಕೆಯಿಂದ ಜನತೆಯ ಮೂಲಭೂತ ಸೌಕರ್ಯಗಳಿಗೆ ತೊಡಕು ಉಂಟಾಗುತ್ತದೆ. ಇದರಿಂದ ಬಡತನ ಹೆಚ್ಚಾಗುತ್ತದೆ. ಹಾಗಾಗಿ ಈ ಕಾರ್ಯಕ್ರಮ ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕಾದ ಅಗತ್ಯತೆ ಇದೆ. ಜನಸಂಖ್ಯಾ ಸ್ಪೋಟದಿಂದ ಗ್ರಾಮೀಣ ಭಾಗದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ನಡೆಯಬೇಕಾಗಿದೆ ಎಂದರು.
ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ಧನ ಉಪಸ್ಥಿತರಿದ್ದರು. ಸಭೆಯಲ್ಲಿ ಸಾಧಕರಾದ ಆರೋಗ್ಯ ಕಾರ್ಯಕರ್ತೆ ಮಾಲತಿ ಎಂ.ಡಿ. ಶಿರಾಡಿ ಮತ್ತು ಆಶಾ ಕಾರ್ಯಕರ್ತೆ ದಿವ್ಯ ಬಿಳಿನೆಲೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಪನ್ಮೂಲವ್ಯಕ್ತಿಗಳಾದ ಡಾ. ದೀಪಕ್ ರೈ ಮತ್ತು ಡಾ. ವಿಶ್ವೇಶ್ವರ ಹೆಗ್ಡೆ ಅಡ್ಯನಡ್ಕ ಮಾಹಿತಿ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಕಿ ಪದ್ಮಾವತಿ ವಂದಿಸಿದರು. ತಾಪಂ ವ್ಯವಸ್ಥಾಪಕ ಶಿವಪ್ರಕಾಶ್ ಅಡ್ಪಂಗಾಯ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button