ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು- ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ-2022…

ಪುತ್ತೂರು: ವಿಜ್ಞಾನ ಜ್ಞಾನಗಳ ಆಗರ, ಇದು ಅಸಂಖ್ಯಾತ ಸಂಶೋಧಕರ ಅವಿರತ ಪ್ರಯತ್ನಗಳ ಫಲ. ದಿನದಿಂದ ದಿನಕ್ಕೆ ಆಗುತ್ತಿರುವ ತಂತ್ರಜ್ಞಾನದ ಬೆಳವಣಿಗೆಗೆ ನಾವು ಉನ್ನತೀಕರಿಸಿಕೊಳ್ಳಲೇಬೇಕು ಎಂದು ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಪ್ರೊ.ಚಂದ್ರಕುಮಾರ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು, ಭಾರತೀಯ ತಾಂತ್ರಿಕ ಶಿಕ್ಷಣ ಸಂಘ ನವದೆಹಲಿ, ವಿವೇಕಾನಂದ ಸಂಶೋಧನಾ ಕೇಂದ್ರ ಪುತ್ತೂರು ಮತ್ತು ಐಇಇಇ ವಿಸಿಇಟಿ ಇದರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ಕಾರ್ಯಾಗಾರ ಜ್ಞಾನ ಸಂಗಮ-2022 ಮತ್ತು ವಿದ್ಯಾರ್ಥಿಗಳ ಪ್ರಾಜೆಕ್ಟ್‍ಗಳ ಪ್ರದರ್ಶನ ಆವಿಷ್ಕಾರ್-2022ನ್ನು ಉದ್ಘಾಟಿಸಿ ಮಾತನಾಡಿದರು.
ಬೆನ್ನು ತಟ್ಟಿ ಗುರಿತಲುಪುವ ತನಕ ಹುರಿದುಂಬಿಸುವವರೊಡನೆ ಒಡನಾಟವನ್ನು ಇಟ್ಟುಕೊಳ್ಳಬೇಕು ಮತ್ತು ಹಕ್ಕಿನೊಟ್ಟಿಗೆ ಕರ್ತವ್ಯ ಪ್ರಜ್ಞೆಯನ್ನೂ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆನೀಡಿದರು.
ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ ಮಾತನಾಡಿ ಆವಿಷ್ಕಾರ ಮತ್ತು ನಿರ್ಮಾಣ ಇವೆರಡೂ ಸಮಾನಾಂತರವಾಗಿ ಹೋದಾಗ ಮಾತ್ರ ಸಂಶೋಧನೆ ಫಲಪ್ರದವಾಗುತ್ತದೆ ಎಂದರು. ತಮ್ಮಲ್ಲಿರುವ ಯೋಜನೆಗಳನ್ನು ಕಮರುವುದಕ್ಕೆ ಬಿಡಬೇಡಿ ಇತರರೊಡನೆ ಹೇಳಲಾರೆ ಎನ್ನುವ ಮನಸ್ಥಿತಿಯಿಂದ ಹೊರಬಂದು ಅದನ್ನು ಯೋಜನೆಯನ್ನಾಗಿಸಿ ಇತರರೊಡನೆ ಹಂಚಿಕೊಳ್ಳಿ ಈ ನಿಮ್ಮ ಯೋಚನೆಯಿಂದ ಸಮಾಜಕ್ಕೆ ಆಗುವ ಉಪಯೋಗ ಅಗಾಧವಾಗಿರಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಮಾತನಾಡಿ ಪ್ರತಿಯೊಂದು ಆವಿಷ್ಕಾರಗಳೂ ಆಕಸ್ಮಿಕಗಳಲ್ಲ ಅದು ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲ ಅಂಥ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಓದಿಗಷ್ಟೇ ತಮ್ಮನ್ನು ತಾವು ಸೀಮಿತಗೊಳಿಸಬೇಡಿ, ಜ್ಞಾನದ ತುಡಿತ ನಿಮ್ಮಲ್ಲಿರಲಿ ಎಂದರು. ಸಿಗುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಿ ಎಂದು ನುಡಿದರು.
ಇಲ್ಲಿ ಮಂಡಿಸಲ್ಪಡುವ ಪ್ರೌಢ ಪ್ರಬಂಧಗಳನ್ನು ಮುದ್ರಿಸಿ ಪ್ರಕಟಿಸಲಾದ ಸಂಚಿಕೆಯನ್ನು ಅತಿಥಿಗಳು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಜ್ಞಾನಸಂಗಮ-2022ರ ಸಂಯೋಜಕಿ ಪ್ರೊ.ರಜನಿ ರೈ, ಆವಿಷ್ಕಾರ್-2022ರ ಸಂಯೋಜಕ ಪ್ರೊ.ಪ್ರಭಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿ, ಪ್ರೊ.ಪ್ರಭಾಕರ್ ವಂದಿಸಿದರು. ವಿದ್ಯಾರ್ಥಿನಿಯರಾದ ಚೈತ್ರಾ ಮತ್ತು ಸಮೀಕ್ಷಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button