ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮ…

ಪುತ್ತೂರು: ದೇಶ ಕಂಡ ಅಪ್ರತಿಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಸಂಖ್ಯಾ ಶಾಸ್ತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು, ಕನಿಷ್ಟ ಜೀವಿತಾವಧಿಯಲ್ಲಿ ಅವರು ಸಾಧಿಸಿದ್ದು ಅಪಾರ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಡಾ.ರಾಘವೇಂದ್ರ.ಎ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗ, ವಿಶನ್ ಗ್ರೂಪ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ಆನ್‍ಲೈನ್ ಮೂಲಕ ನಡೆಯುವ ಸಂಖ್ಯಾ ಸಿದ್ದಾಂತಕ್ಕೆ ರಾಮಾನುಜನ್ ಅವರ ಕೊಡುಗೆ ಮತ್ತು ಅದರ ಅನ್ವಯಿಸುವಿಕೆ ಎನ್ನುವ ವಿಷಯದ ಬಗ್ಗೆ ನಾಲ್ಕು ದಿನಗಳ ಉಪನ್ಯಾಸಕರ ಉದ್ದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತನ್ನ ಜೀವನವನ್ನಿಡೀ ಗಣಿತಕ್ಕೇ ಮುಡಿಪಾಗಿಟ್ಟಿದ್ದ ರಾಮಾನುಜನ್ ಅವರು ತನ್ನದೇ ಪ್ರಮೇಯಗಳನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಂಡಿದ್ದರು. ಅವೆಲ್ಲವೂ ನಿಜವೆಂದು ಸಾಬೀತಾಗಿದೆ ಎಂದರು.
ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ.ಕೆ ಮಾತನಾಡಿ ಕೇವಲ 32 ವರ್ಷಗಳ ತನ್ನ ಜೀವಿತದ ಸಮಯದಲ್ಲಿ ರಾಮಾನುಜನ್ ಅವರು ಗಣಿತದ 3900 ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದರು ಎಂದರು. ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಪ್ರಾಧ್ಯಾಪಕರು ತಮ್ಮನ್ನು ತಾವು ಎತ್ತರಿಸಿಕೊಳ್ಳುವುದು ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಧ್ಯಾಪಕರು ಅಧುನೀಕರಿಸಿಕೊಳ್ಳುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬ ಸಹಕಾರಿಯಾಗುತ್ತವೆ ಎಂದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.
ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ. ಮಾಧವಿ ಪೈ ಸ್ವಾಗತಿಸಿ, ಪ್ರೊ.ನಯನಾ.ಪಿ ವಂದಿಸಿದರು. ಪ್ರೊ.ಶ್ವೇತಾಂಬಿಕಾ.ಪಿ ಹಾಗೂ ಪ್ರೊ.ಲತಾ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button