ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ವಿಶ್ವ ರಸ್ತೆ ಅಪಘಾತ ಸಂತ್ರಸ್ತರ ಸ್ಮರಣಾರ್ಥ ದಿನಾಚರಣೆ…

ಪುತ್ತೂರು: ರಸ್ತೆ ಅಪಘಾತಗಳು ಅದರಿಂದುಂಟಾಗುವ ಗಾಯಗಳು ಮತ್ತು ಸಾವುನೋವುಗಳು ಅನಿರೀಕ್ಷಿತ, ಆಘಾತಕಾರಿ ಮತ್ತು ಹಿಂಸಾತ್ಮಕವಾದದ್ದು ಮತ್ತು ಅದರ ಪ್ರಭಾವ ಶಾಶ್ವತವಾದದ್ದು ಎಂದು ಸವಣೂರಿನ ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಹಾಗೂ ಆಸ್ಟ್ರೇಲಿಯಾದ ಏರ್‍ಬಸ್ ಸಂಸ್ಥೆಯ ಪೂರ್ವ ಇಂಜಿನಿಯರಿಂಗ್ ಮೆನೇಜರ್ ಅಶ್ವಿನ್.ಎಲ್.ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಕಾಲೇಜಿನ ಯೂತ್ ರೆಡ್‍ಕ್ರಾಸ್ ಘಟಕ ಮತ್ತು ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ರಸ್ತೆ ಅಪಘಾತ ಸಂತ್ರಸ್ತರ ಸ್ಮರಣಾರ್ಥ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಅಪಘಾತದಲ್ಲಿ ಬಡವ-ಬಲ್ಲಿದ, ಚಿಕ್ಕವ-ದೊಡ್ಡವ ಎನ್ನುವ ಬೇಧವಿಲ್ಲದೆ ಎಲ್ಲರೂ ಸಂತ್ರಸ್ತರಾಗುತ್ತಾರೆ. ಅಸಮರ್ಪಕವಾದ, ಸಹಾನುಭೂತಿಯಿಲ್ಲದ ಕ್ರಮಗಳಿಂದಾಗಿ ಹಾಗೂ ಗುಣಮಟ್ಟದ ರಸ್ತೆಗಳು ಮತ್ತು ಮೂಲ ಸೌಕರ್ಯಗಳ ಕೊರತೆಯಿಂದ ಇದು ಸಂಭವಿಸುತ್ತದೆ. ರಸ್ತೆ ಅಪಘಾತದ ಸಂತ್ರಸ್ತರಿಗಾದ ನಷ್ಟ ಮತ್ತು ಸಂಕಷ್ಟಗಳಿಗೆ ಸಾರ್ವಜನಿಕ ಮನ್ನಣೆಯನ್ನು ಕೊಡಿಸುವುದು ಮತ್ತು ಜಾಗೃತಿಯನ್ನು ನೀಡುವುದು ಇದರ ಮೂಲ ಉದ್ದೇಶ ಎಂದವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಹಿರಿಯ ಅಂತಾರಾಷ್ಟ್ರೀಯ ಮನಃಶಾಸ್ತ್ರಜ್ಞ ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಂಘಟಕ ಡಾಮಸ್ಕರೇನ್ಹಸ್ ಪೇಟ್ರಿಕ್ ಸಿಪ್ರಿಯಾನ್ ಮಾತನಾಡಿ ಅಪಘಾತಗಳಿಗೆ ಮಾನವನ ಮಾನಸಿಕ ಸ್ಥಿತಿಗತಿಯೂ ಕಾರಣವಾಗುತ್ತದೆ ಎಂದರು. ತೀರಾ ದುಖಃದ ಸನ್ನಿವೇಶದಲ್ಲಿ ಅಥವಾ ಅತಿಯಾದ ಉದ್ವೇಗದ ಸಂದರ್ಭದಲ್ಲಿ ವಾಹನ ಚಲಾವಣೆಯು ಅಪಾಯಕಾರಿಯಾಗಬಹುದು. ರಸ್ತೆಯಲ್ಲಿ ನನ್ನಂತೇ ಇತರ ಚಾಲಕರೂ ವಾಹನ ಚಲಾಯಿಸುತ್ತಿದ್ದಾರೆ ಎನ್ನುವ ಮನಸ್ಥಿತಿ ಎಲ್ಲರಲ್ಲೂ ಇರಬೇಕಾದ್ದು ಅವಶ್ಯಕ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಮಾತನಾಡಿ ಅತಿವೇಗದಲ್ಲಿ ಓಡುವ ಹೊಸ ಹೊಸ ಮಾದರಿಯ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಖರೀದಿಗೆ ಮುನ್ನ ನಮ್ಮ ರಸ್ತೆಯ ಸ್ಥಿತಿಗತಿಗೆ ಇದು ಆವಶ್ಯವೇ ಎಂದು ಯೋಚಿಸಬೇಕು ಎಂದರು. ಕಾಲೇಜಿನ ವಿದ್ಯಾರ್ಥಿಯೋರ್ವ ಅಪಘಾತಕ್ಕೊಳಗಾದ ಘಟನೆಯನ್ನು ನೆನಪಿಸಿಕೊಂಡ ಅವರು ಎಕ್ಸಲರೇಟರ್ ಅದುಮಿ ಅತಿವೇಗದಲ್ಲಿ ಸಂಚರಿಸುವ ಮೊದಲು ತಮ್ಮ ಹೆತ್ತವರನ್ನು, ಪೋಷಕರನ್ನು ನೆನಪಿಸಿಕೊಳ್ಳಿ ಎಂದರು.
ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಪುತ್ತೂರು ಇದರ ಕಾರ್ಯದರ್ಶಿ ಆಸ್ಕರ್ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀನಿಧಿ.ಸಿ ಸ್ವಾಗತಿಸಿದರು, ಕಾಲೇಜಿನ ಯೂತ್ ರೆಡ್‍ಕ್ರಾಸ್ ಘಟಕದ ಸಂಯೋಜಕ ಪ್ರೊ.ಅಭಿಷೇಕ್ ಕುಮಾರ್.ಕೆ ವಂದಿಸಿದರು. ಸ್ನೇಹಾ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button