ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – 73ನೇ ಗಣರಾಜ್ಯೋತ್ಸವ ಆಚರಣೆ…
ಪುತ್ತೂರು: ಭಾವೈಕ್ಯತೆಯೇ ಜೀವಾಳವಾಗಿರುವ ನಮ್ಮ ದೇಶ ಭಾರತವು ಸಾಂಸ್ಕೃತಿಕ ಇತಿಹಾಸ ಹಾಗೂ ವೀರ ಧೀರರ ಪರಂಪರೆಯನ್ನು ಹೊಂದಿದೆ. ಸೌಹಾರ್ಧತೆ, ಶಾಂತಿ ಮತ್ತು ಸಮಾನತೆಗಳಿಂದ ಕೂಡಿದ ರಾಷ್ಟ್ರದ ಸಾರ್ವಭೌಮತೆಯನ್ನು ಕಾಪಾಡುವುದ ನಮ್ಮೆಲ್ಲರ ಕರ್ತವ್ಯ ಎಂದು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಹೇಳಿದರು.
ಅವರು ಕಾಲೇಜಿನಲ್ಲಿ ನಡೆದ 73ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಮಾಡಿ ಮಾತಾನಾಡಿದರು. ಅಸಂಖ್ಯಾತ ನೇತಾರರು, ತ್ಯಾಗ ಬಲಿದಾನದ ಮೂಲಕ ಸ್ವಾತಂತ್ಯವನ್ನು ಗಳಿಸಿಕೊಟ್ಟರು. ವಿಶ್ವದ ಅತಿದೊಡ್ಡ ಸಂವಿಧಾನವನ್ನು ರೂಪಿಸುವ ಮೂಲಕ ತಮ್ಮ ಜವಾಬ್ಧಾರಿಯನ್ನು ನಿರ್ವಹಿಸಿದರು. ಈ ಸಂವಿಧಾನವನ್ನು ಗೌರವಿಸಿ ಉಳಿಸಿ ಬೆಳೆಸುವ ಮಹತ್ತರ ಜವಾಬ್ಧಾರಿ ನಮ್ಮ ಮೇಲಿದೆ. ಈ ಜವಾಬ್ಧಾರಿಯನ್ನು ನಿರ್ವಹಿಸುತ್ತಾ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸೋಣ ಎಂದವರು ಹೇಳಿದರು.
ಸಂವಿಧಾನದ ಆಶಯಗಳ ಬಗ್ಗೆ ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಮಾತನಾಡಿ ಜಗತ್ತಿನ ಅತಿದೊಡ್ಡ ಸಂವಿಧಾನವು ಡಾ.ಬಿ.ಆರ್.ಅಂಬೇಡ್ಕರ್ ಅವರ ಮುಂದಾಳುತ್ವದಲ್ಲಿ ರಚನೆಯಾಯಿತು. ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅಧಿಕಾರವನ್ನು ನೀಡುವ ಸಂವಿಧಾನದ ರಚನೆಯಲ್ಲಿ ಅನೇಕರ ಪಾತ್ರವಿದೆ ಎಂದರು. ಮಂಡೂಕೋಪನಿಷತ್ತಿನಿಂದ ಆಯ್ದ ಸತ್ಯಮೇವಜಯತೇ ಎನ್ನುವ ಧ್ಯೇಯ ವಾಕ್ಯ ಸಂವಿಧಾನವಲ್ಲದೇ ರಾಷ್ಟ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಕಾರ್ಯದಲ್ಲಿಯೂ ಹಾಸುಹೊಕ್ಕಾಗಿದೆ ಎಂದರು.
ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ ಸ್ವಾಗತಿಸಿದರು. ಎಂಬಿಎ ವಿಭಾಗದ ಪ್ರೊ.ರೇಶ್ಮಾ ಪೈ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.