ಸುದ್ದಿ

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು – ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ ಪದಕ ವಿಜೇತರಿಗೆ ಅಭಿನಂದನೆ…

ಪುತ್ತೂರು: ನಿರ್ಧಿಷ್ಟ ಗುರಿ, ನಿರಂತರ ಅಭ್ಯಾಸ, ಅದಕ್ಕೆ ಪೂರಕವಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಇವೆಲ್ಲವೂ ಮಿಳಿತವಾದಾಗ ನಾವು ಯಾವುದೇ ಸಾಧನೆಯನ್ನು ಮಾಡಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರದ ಎಸ್‍ಜೆಸಿಐಟಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 23 ನೇ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ 6 ನೂತನ ಕೂಟ ದಾಖಲೆಗಳ ಸಹಿತ 13 ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು 4 ಕಂಚಿನ ಪದಕಗಳನ್ನು ಗೆಲ್ಲುವುದರ ಜತೆಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್ ಟ್ರೋಫಿ, ಪುರುಷರ ವಿಭಾಗದ ಚಾಂಪಿಯನ್‍ನಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಹಾಗೂ ಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿದ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವನ್ನು ಗೌರವಿಸಿ ಮಾತಾಡಿದರು.
ಎಂಜಿನಿಯರಿಂಗ್ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಸಿಗುವುದು ಕಡಿಮೆ. ಆದರೆ ಸಿಕ್ಕಿದ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ನಿರಂತರ ಅಭ್ಯಾಸವನ್ನು ಮಾಡಿ ಕಾಲೇಜಿಗೆ ಕೀರ್ತಿಯನ್ನು ತಂದ ನಿಮ್ಮ ಈ ಸಾಧನೆಯು ಇತರರಿಗೆ ಸ್ಪೂರ್ಥಿಯಾಗಲಿ ಎಂದೂ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ಆಡಳಿತ ಮಂಡಳಿಯ ನಿರ್ಧಾರ, ಪ್ರಾಂಶುಪಾಲರ ಪ್ರೋತ್ಸಾಹ, ದೈಹಿಕ ಶಿಕ್ಷಣ ನಿರ್ದೇಶಕರ ಸರಿಯಾದ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಸಂಘಟಿತ ಪ್ರಯತ್ನದಿಂದ ಇದುವರೆಗೆ ಮಾಡಲಾಗದ್ದನ್ನು ನಾವು ಸಾಧಿಸಿ ತೋರಿಸಿದ್ದೇವೆ. ಇದಕ್ಕಾಗಿ ಪರಿಶ್ರಮ ಪಟ್ಟ ಎಲ್ಲರೂ ಅಭಿನಂದನಾರ್ಹರು ಎಂದರು. ಸೂಕ್ತ ಮಾರ್ಗದರ್ಶನವನ್ನು ನೀಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಹಾಗೂ ತರಬೇತುದಾರ ಭಾರತೀಯ ವಾಯುಪಡೆಯ ವಿಶ್ರಾಂತ ಅತ್ಲೆಟಿಕ್ ಕೋಚ್ ರವಿಶಂಕರ್ ಮುಕುಂದ ಅವರ ಸೇವೆ ಅಪಾರವಾದದ್ದು ಎಂದರು. ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಅವರು ತಂಡದ ಎಲ್ಲಾ ಸದಸ್ಯರಿಗೂ ಕಾಲೇಜಿನ ಪರವಾಗಿ ನಗದು ಬಹುಮಾನವನ್ನು ಘೋಷಿಸಿದರು.
ನೂತನ ಕೂಟ ದಾಖಲೆಯನ್ನು ಮಾಡಿದ ವಿದ್ಯಾರ್ಥಿಗಳನ್ನು, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಹಾಗೂ ತರಬೇತುದಾರ ಭಾರತೀಯ ವಾಯುಪಡೆಯ ವಿಶ್ರಾಂತ ಅತ್ಲೆಟಿಕ್ ಕೋಚ್ ರವಿಶಂಕರ್ ಮುಕುಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕ ರವಿಕೃಷ್ಣ.ಡಿ.ಕಲ್ಲಾಜೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮತ್ತು ತರಬೇತುದಾರ ರವಿಶಂಕರ್ ಮುಕುಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಕ್ರೀಡಾಕೂಟದ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ವಂದಿಸಿದರು. ಪ್ರೊ.ನಿಶಾ.ಜಿ.ಆರ್ ಹಾಗೂ ಪ್ರೊ.ಭಾನುಪ್ರಿಯಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button