ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಪದವಿ ಪ್ರಧಾನ ಕಾರ್ಯಕ್ರಮ…

ಪುತ್ತೂರು: ಇಂಜಿನಿಯರ್ ಆದವನಿಗೆ ಹೊಸತನ್ನು ಮಾಡುವ ತುಡಿತ ಇರಬೇಕು ಇಲ್ಲವಾದರೆ ಆತ ಇಂಜಿನಿಯರ್ ಬದಲಿಗೆ ಫಾಲೋವರ್ ಅನಿಸಿಕೊಳ್ಳುತ್ತಾನೆ ಎಂದು ಖ್ಯಾತ ವಾಗ್ಮಿ ಹಾಗೂ ಯುವಾ ಬ್ರಿಗೇಡ್‍ನ ಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆದ ಪದವಿ ಪ್ರಧಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು.
ಇಂಜಿನಿಯರಿಂಗ್ ಮುಗಿದಾಕ್ಷಣ ಓದು ಮುಗಿದಂತಲ್ಲ, ಓದು ನಿರಂತರವಾಗಿರಬೇಕು ಮತ್ತು ಅದನ್ನು ಆಚರಣೆಗೆ ತರುವ ಕೆಲಸವೂ ನಿರಂತರವಾಗಿರಬೇಕು ಎಂದರು. ಶಿಕ್ಷಣ ಹೆಚ್ಚಾದಷ್ಟು ಧಿಮಾಕು ಜಾಸ್ತಿಯಾಗಬಾರದು ಬದಲಿಗೆ ವಿದ್ಯಾ ದದಾತಿ ವಿನಯಂ ಎನ್ನುವ ಮಾತಿನಂತೆ ವಿನಯವಂತರಾಗಬೇಕು ಎಂದು ನುಡಿದರು. ವಿದ್ಯಾರ್ಥಿಗಳಿಗೆ ಅಧ್ಯಾಪಕರು ತಮ್ಮ ಜ್ಞಾನವನ್ನು ಧಾರೆ ಎರೆದಂತೆ ಪಡಕೊಂಡ ನೀವು ಮರಳಿ ಸಮಾಜಕ್ಕೆ ಕೊಡಬೇಕಾದದ್ದು ಬಹಳಷ್ಟಿದೆ, ಜಗತ್ತು ವಿಶಾಲವಾಗಿದೆ ಅಲ್ಲಿ ನೀವು ಸಕ್ರಿಯರಾಗಿರಬೇಕಾದರೆಇಚ್ಚಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಗಳನ್ನು ಬೆಳೆಸಿಕೊಳ್ಳಿ ಎಂದು ನುಡಿದರು.
ಗೌರವ ಅತಿಥಿಗಳಾಗಿದ್ದ ಕಾಲೇಜಿನ ರ್ಯಾಂಕ್ ವಿಜೇತ ಪೂರ್ವ ವಿದ್ಯಾರ್ಥಿನಿ ಪ್ರಸ್ತುತ ರಾಬರ್ಟ್ ಬಾಷ್ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ತಜ್ಞೆಯಾಗಿರುವ ಸ್ನೇಹ ಶಿವಾನಂದ್ ಇದುರ್ಕರ್ ತಮ್ಮ ಕಾಲೇಜು ಜೀವನದ ಸುಂದರ ದಿನಗಳನ್ನು ಮೆಲುಕು ಹಾಕಿದರು. ಕಾರ್ಪೊರೇಟ್ ಜಗತ್ತಿನಲ್ಲಿ ಸಾಕಷ್ಟು ಉದ್ಯೋಗ ಅವಕಾಶವಿದೆ ಅದನ್ನು ಪಡೆದುಕೊಳ್ಳುವ ವಿಧಾನವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ನಮ್ಮ ಪಠ್ಯಕ್ರಮವು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಳ್ಳುವಂತದ್ದಲ್ಲ ಇದರಿಂದಾಗಿ ಕಂಪೆನಿಗಳು ಬಯಸುವ ನೂತನ ತಂತ್ರಜ್ಞಾನಗಳ ಬಗ್ಗೆ ಅಭ್ಯಸಿಸುವುದು ಆವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ
ಅಂಕಪಟ್ಟಿಯ ಅಧಾರದ ಮೇಲೆ ಉದ್ಯೋಗವನ್ನು ನೀಡುವ ಪದ್ದತಿ ಕ್ರಮೇಣವಾಗಿ ಬದಲಾಗುತ್ತಿದೆ. ತನ್ನ ಮತ್ತು ಸಮಾಜದ ಕುರಿತ ಅವನ ಮನೋಭಾವವನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎನ್ನುವ ನೀತಿ ರೂಪಿಸಲಾಗುತ್ತದೆ. ಹಾಗಾಗಿ ತಮ್ಮ ವ್ಯಾವಹಾರಿಕ ಜೀವನದ ಯಶಸ್ಸಿಗೆ ಜೀವನ ಮೌಲ್ಯಗಳನ್ನು ಪಾಲಿಸುವುದು ಮುಖ್ಯವಾಗಿದೆ. ಅಂತಹ ಮೌಲ್ಯಗಳನ್ನು ನೀಡುವ ಕಾರ್ಯದಲ್ಲಿ ವಿವೇಕಾನಂದ ಸಂಸ್ಥೆಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಕಲಿತ ಸಂಸ್ಥೆಗೆ, ಮಾತಾಪಿತರಿಗೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರನ್ನು ತನ್ನಿ ಎಂದು ಹಾರೈಸಿದರು.
ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದು 6 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ಸಿಂಧೂರ ಸರಸ್ವತಿ ಅವರಿಗೆ ಕಾಲೇಜಿನ ನಿರ್ದೇಶಕ ಸುಬ್ರಮಣ್ಯ ಭಟ್.ಟಿ.ಎಸ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಿದರು. ನೀಟ್ ಪರೀಕ್ಷೆಯಲ್ಲಿ ವಿಶೇಷ ವಿಭಾಗದಲ್ಲಿ ದೇಶಕ್ಕೆ ದ್ವಿತೀಯ ರ್ಯಾಂಕ್ ಗಳಿಸಿದ ಸಹಸಂಸ್ಥೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಲಕ್ಷ್ಮಿ ಅವರನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ರಾವ್.ಪಿ, ಸಂಚಾಲಕ ರಾಧಾಕೃಷ್ಣ ಭಕ್ತ, ಕೋಶಾಧಿಕಾರಿ ಮುರಳೀಧರ ಭಟ್.ಬಿ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ಸುಬ್ರಮಣ್ಯ ಭಟ್.ಟಿ.ಎಸ್, ವಿಶ್ವಾಸ್ ಶೆಣೈ, ಅಚ್ಯುತ ಪ್ರಭು ಮತ್ತು ವಿಭಾಗ ಮುಖ್ಯಸ್ಥರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ಸ್ವಾಗತಿಸಿದರು. ಎಲೆಕ್ಟ್ರಾನಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್ ಮತ್ತು ಉಪನ್ಯಾಸಕ ಪ್ರೊ.ಸುಹಾನ್ ದಾಸ್ ಅತಿಥಿಗಳನ್ನು ಪರಿಚಯಿಸಿದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಕಾರ್ಯಕ್ರಮ ಸಂಯೋಜಕ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ವಂದಿಸಿದರು. ಉಪನ್ಯಾಸಕಿಯರಾದ ಪ್ರೊ. ಭಾನುಪ್ರಿಯಾ.ಎಂ ಮತ್ತು ಪ್ರೊ. ನಿಶಾ.ಜಿ.ಆರ್ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button