ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಕನ್ನಡ ರಾಜ್ಯೋತ್ಸವ ದಿನಾಚರಣೆ…
ಪುತ್ತೂರು: ಸಾಮ್ರಾಟ್ ಅಶೋಕನು ದಕ್ಷಿಣ ಭಾರತದಲ್ಲಿ ಕ್ರಿ.ಪೂ 2250 ರಲ್ಲಿ ಮೊತ್ತ ಮೊದಲ ಬಾರಿಗೆ ಅಕ್ಷರ ಸಂಸ್ಕೃತಿಯನ್ನು ಜಾರಿಗೊಳಿಸಿದ, ಮುಂದೆ ಇದು ಹಂತ ಹಂತವಾಗಿ ಪರಿಷ್ಕರಣೆಗೊಳ್ಳುತ್ತಾ ವ್ಯಾಪಕ ಬದಲಾವಣೆಯನ್ನು ಹೊಂದಿತು ಎಂದು ಸ್ವಾಯತ್ತ ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವರಾದ ಡಾ.ಎಚ್.ಜಿ.ಶ್ರೀಧರ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕನ್ನಡ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ನಾಡಿನಲ್ಲಿ ಮೊದಲಿಗೆ ಕದಂಬರು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಬಳಸಿಕೊಂಡರು. ಆ ಕಾಲದಲ್ಲಿಯೇ ಅನೇಕ ಶಾಸನಗಳು ನಿರ್ಮಾಣವಾದವು ಎಂದರು. ಅನ್ಯ ಭಾಷೆಗಳ ಹಾವಳಿಯಿಂದ ಕನ್ನಡವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ, ಈ ಕಾಲೇಜಿನ ಕನ್ನಡ ಸಂಘವು ಅದನ್ನು ಸಮರ್ಥವಾಗಿ ನಿಭಾಯಿಸಲಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ತನ್ನ ಕಾಲೇಜು ದಿನಗಳಲ್ಲಿ ಅನ್ಯ ರಾಜ್ಯದ ವಿದ್ಯಾರ್ಥಿಗಳೇ ಅಧಿಕವಾಗಿದ್ದ ಕಾಲೇಜಿನಲ್ಲಿ ಅಲ್ಪ ಸಂಖ್ಯೆಯ ಕನ್ನಡದ ವಿದ್ಯಾರ್ಥಿಗಳು ಜತೆ ಸೇರಿ ರಾಜ್ಯೋತ್ಸವವನ್ನು ಆಚರಿಸುತ್ತಿದ್ದ ವಿಷಯಗಳನ್ನು ಹಂಚಿಕೊಂಡರು. ಕನ್ನಡ ರಾಜ್ಯೋತ್ಸವವು ಬರೀ ಆಚರಣೆಗೆ ಸೀಮಿತವಾಗದೆ ಪ್ರತಿ ಮನೆ ಹಾಗೂ ಮನಗಳಲ್ಲಿ ಕನ್ನಡ ಪ್ರೇಮವು ವಿಜೃಂಭಿಸಲಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ, ಕನ್ನಡ ಸಂಘದ ಸಂಯೋಜಕ ಹಾಗೂ ಮೆಕ್ಯಾನಿಕಲ್ ವಿಭಾಗ ಮುಖ್ಯಸ್ಥ ಡಾ.ಮನುಜೇಶ್.ಬಿ.ಜೆ, ಎನ್‍ಎಸ್‍ಎಸ್ ಘಟಕದ ಸಂಯೋಜಕಿ ಪ್ರೊ.ನಿಶಾ.ಜಿ.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯೋತ್ಸವದ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಸಂಯೋಜಕ ಪ್ರೊ.ನವೀನ್.ಸಿ ಕನ್ನಡ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವನೆಗೈದರು. ವಿದ್ಯಾರ್ಥಿಗಳಾದ ಸಾತ್ವಿಕ್.ವಿ.ನಾಯಕ್ ಸ್ವಾಗತಿಸಿ, ಯಶಸ್ವಿ ನಾರಾಯಣ್ ವಂದಿಸಿದರು. ವಿದಿಶಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.