ಬಿ ಜೆ ಪಿ ನಾಯಕರು ತಾಳ್ಮೆಯಿಂದ ಇರಿ ಬಡವರಿಗೆ ಸಹಾಯ ಮಾಡಿದರೆ ದೇಶ ದಿವಾಳಿ ಆಗಲ್ಲ – ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಅಭಿಮತ…

ಸುಳ್ಯ: ಕರ್ನಾಟಕದಲ್ಲಿ ಪ್ರಾರಂಭಿಸಿದ ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ದೇಶದ ಆರ್ಥಿಕತೆಗೆ ಪೆಟ್ಟು ಬೀಳಲಿದ್ದು ದೇಶ ದಿವಾಳಿಯಾಗಲಿದೆ ಎಂದು ಪ್ರಧಾನಿ ಮೋದಿಯವರ ಹಾಗು ಬಿ ಜೆ ಪಿ ನಾಯಕರ ಹೇಳಿಕೆಗೆ ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಕಿಡಿ ಕಾರಿದ್ದಾರೆ.
ಬಡವರಿಗೆ ಏನಾದರು ಸಹಾಯ ಮಾಡಿದರೆ ನಿಮಗೆ ದೇಶ ದಿವಾಳಿಯ ಕನಸು ಬೀಳುತ್ತದೆ. ನಾವು ನಮ್ಮ ಗ್ಯಾರಂಟಿಗಳಿಗೆ ವಾರ್ಷಿಕ 50 ಸಾವಿರ ಕೋಟಿ ಖರ್ಚು ಮಾಡಿದರೆ ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಮಾಡಲು 13 ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥರಿದ್ದಾರೆ. ನೀವು ಶ್ರೀಮಂತರಿಗೆ, ಕಾರ್ಪೋರೇಟರ್ ಗಳಿಗೆ, ಹೊರ ದೇಶಗಳಿಗೆ ಕೋಟಿಗಟ್ಟಲೆ ಖರ್ಚು ಮಾಡಿದರೆ ದೇಶ ದಿವಾಳಿ ಆಗುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿಯವರು ತಾಲಿಬಾನಿಗಳಿಗೆ 200 ಕೋಟಿ, ಬಾಂಗ್ಲಾದೇಶಕ್ಕೆ 15 ಸಾವಿರ ಕೋಟಿ, ಭೂತಾನ್ ದೇಶಕ್ಕೆ 10 ಸಾವಿರ ಕೋಟಿ, ಮಂಗೋಲಿಯಂ ದೇಶಕ್ಕೆ 71 ಸಾವಿರ ಕೋಟಿ, ಮೋರಿಶಿಯಸ್ ದೇಶಕ್ಕೆ 5 ಸಾವಿರ ಕೋಟಿ, ದಕ್ಷಿಣ ಆಫ್ರಿಕ ಮತ್ತು ನೇಪಾಳಕ್ಕೆ 36 ಕೋಟಿ ಕೊಟ್ಟಾಗ ಪಾಕಿಸ್ತಾನದ ಪ್ರಧಾನ ಮಂತ್ರಿ ಮನೆಗೆ ಭೇಟಿ ನೀಡಿ ಉಡುಗೊರೆ ಕೊಟ್ಟಾಗ ದಿವಾಳಿ ಆಗುವುದಿಲ್ಲವೇ? ಅಲ್ಲದೆ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ 3 ಸಾವಿರ ಕೋಟಿ ಮತ್ತು ಅಮೇರಿಕಾ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಬಂದಾಗ ನಮಸ್ತೆ ಕಾರ್ಯಕ್ರಮಕ್ಕೆ 100 ಕೋಟಿ ಖರ್ಚು ಮಾಡಿದಾಗ, ನೀವು ದೇಶ ವಿದೇಶ ಸುತ್ತುವುದಕ್ಕೆ 4 ಸಾವಿರ ಕೋಟಿ, ಶ್ರೀಮಂತರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾಗ, ಅದಾನಿಯವರಿಗೆ ವಿವಿಧ ಬ್ಯಾಂಕ್ ಗಳಿಂದ 20 ಸಾವಿರ ಕೋಟಿ ಕೊಟ್ಟಾಗ ನಿಮಗೆ ದೇಶ ದಿವಾಳಿ ಬಗ್ಗೆ ಚಿಂತೆ ಆಗಿಲ್ಲ, ಕೇವಲ ಬಡವರಿಗಾಗಿ ಕಾಂಗ್ರೇಸ್ ಏನಾದರು ಯೋಜನೆಗಳು ಹಾಕಿದರೆ ನಿಮಗೆ ದೇಶ ದಿವಾಳಿಯಾಗುತ್ತದೆ ಎಂದು ಗುಲ್ಲೆಬ್ಬಿಸುತ್ತಿರಿ ಅಥವಾ ಸಮುದಾಯಗಳನ್ನು ಎತ್ತಿಕಟ್ಟುತ್ತೀರಿ ಎಂದರು. ಪ್ರಧಾನ ಮಂತ್ರಿ ಮೋದಿಯವರು ಅಮೇರಿಕಕ್ಕೆ ಹೋಗಿ ಟ್ರಂಪ್ ನ್ನು ಅಲ್ಲಿನ ಚುನಾವಣೆಯಲ್ಲಿ ಗೆಲ್ಲಿಸಲು ಕರೆ ಕೊಟ್ಟು ಕೋಟಿ ಕೋಟಿ ಖರ್ಚು ಮಾಡಿದರು. ಆದರೆ ಆ ದೇಶದ ಜನ ಅವರನ್ನು ಸೋಲಿಸಿದರು ಇದೊಂದು ಅಪರೂಪದಲ್ಲಿ ಅಪರೂಪದ ಘಟನೆ ಒಂದು ದೇಶದ ಚುನಾವಣೆಯಲ್ಲಿ ಇನ್ನೊಂದು ದೇಶದ ಪ್ರಧಾನಿ ಪ್ರಚಾರ ಮಾಡಿ ದೇಶಕ್ಕೆ ಅಪಕೀರ್ತಿ ತಂದವರು ನಮ್ಮ ಪ್ರಧಾನಿಗಳು ಎಂಬುವುದು ಬಿಜೆಪಿ ಯವರಿಗೆ ನೆನಪಿರಲಿ. ಕೇವಲ ಫೋಟೋಗೋಸ್ಕರ ಪ್ರಚಾರಕ್ಕೆ ಬದುಕುವ ಅಧಿಕಾರಶಾಹಿಗಳು ಈ ದೇಶದ ಬಡವರ ಬಗ್ಗೆ ಕಾಳಜಿಯನ್ನು ವಹಿಸಿ ಜನಸಾಮಾನ್ಯರಿಗೆ ಯೋಜನೆಗಳನ್ನು ರೂಪಿಸಬೇಕೆ ಹೊರತು ದೇಶಕ್ಕಾಗಿ ಮತ್ತು ಬಡವರ ಬಗ್ಗೆ ಕಾಳಜಿವುಳ್ಳ ನಾಯಕರಾದ ರಾಹುಲ್ ಗಾಂಧಿಯವರನ್ನು ಟೀಕಿಸುವ ಯಾವುದೇ ನೈತಿಕತೆಯು ವಿರೋಧ ಪಕ್ಷಗಳಿಗೆ ಇಲ್ಲ ಎಂದು ಕೆ.ಪಿ.ಸಿ.ಸಿ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಆಕ್ರೋಶ ವ್ಯಕ್ತ ಪಡಿಸಿದರು.
ಒಡಿಸ್ಸಾದಲ್ಲಿ ನಡೆದ ರೈಲು ದುರಂತದಲ್ಲಿ ಸಾವಿರಾರು ಮಂದಿಯ ಸಾವು- ನೋವು, ಮಣಿಪುರದಲ್ಲಿ ನಡೆದ ಹಿಂಸೆ, ಛತ್ತಿಸ್ ಗಡದಲ್ಲಿ ನಕ್ಸಲ್ ರ ದಾಳಿ ಕುಸ್ತಿ ಪಟುಗಳಿಗೆ ಕಿರುಕುಳ ನೀಡಿದ ಬಿಜೆಪಿ ಸಂಸತ್ ಸದಸ್ಯ ಬ್ರಿಜ್ ಭೂಷಣ ಸಿಂಗ್ ಅವರನ್ನು ರಕ್ಷಿಸುತ್ತಿರುವ ಮತ್ತು ದೇಶದಲ್ಲಿ ನಡೆಯುವ ಗುಂಪು ಗಲಭೆಯಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದ್ದು, ಮೋದಿಯವರ ಆಡಳಿತ ಸಂಪೂರ್ಣ ವಿಫಲವಾಗಿದೆ. ಮುಂದಿನ ಚುನಾವಣೆಯಲ್ಲಿ ದೇಶದಲ್ಲಿ ಕರ್ನಾಟಕದ ಫಲಿತಾಂಶ ಪುನರಾವರ್ತಿಸಲಿದೆ. ಮೋದಿ ಅಮಿತ್ ಮಾಡಿದುಣ್ಣೋ ಮಹರಾಯ ಆಗಲಿದ್ದಾರೆ ಎಂದು ಟಿ.ಎಂ ಶಾಹಿದ್ ತೆಕ್ಕಿಲ್ ಕಿಡಿಕಾರಿದರು.

Sponsors

Related Articles

Back to top button