ಏನಿದು ರೆಮ್ಡೆಸಿವಿರ್ ಔಷಧಿ…….
ರೆಮ್ಡೆಸಿವಿರ್ ಒಂದು ಆಂಟಿವೈರಲ್ ಔಷಧಿಯಾಗಿದೆ. 2009ರಲ್ಲಿ ಹೆಪಟೈಸಿಟ್ ಸಿ ನಿಯಂತ್ರಣಕ್ಕಾಗಿ ಈ ಔಷಧಿಯನ್ನು ಕಂಡು ಹಿಡಿಯಲಾಗಿತ್ತು. 2014ರಲ್ಲಿ ಇದನ್ನು ಎಬೋಲಾಗೆ ಪರಿಣಾಮಕಾರಿ ಔಷಧಿ ಎಂದು ಬಳಸಲಾಗಿದೆ. ಇದೀಗ ಈ ಔಷಧಿಯನ್ನು ತೀವ್ರ ಉಸಿರಾಟ ರೋಗಲಕ್ಷಣ (MERS) ಮತ್ತು ತೀವ್ರ ಉಸಿರಾಟದ ಸಿಂಡ್ರೋಮ್ (SARS)ಗೆ ಬಳಸಲಾಗುತ್ತಿದೆ.
ರೆಮ್ಡೆಸಿವಿರ್ ನ್ನು ಅಮೆರಿಕಾದ ಔಷಧೀಯ ಕಂಪನಿ ಗಿಲ್ಯಾಡ್ ಸೈನ್ಸಸ್ ತಯಾರಿಸಿದೆ. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿದ ಅಧ್ಯಯನದ ಪ್ರಕಾರ, ರೆಮ್ಡೆಸಿವಿರ್ ಔಷಧಿಯಿಂದ ಕೊರೋನಾ ರೋಗಿಗಳ ಚೇತರಿಕೆಯ ಸಮಯವನ್ನು 15 ದಿನಗಳಿಂದ ಸರಾಸರಿ 10ಕ್ಕೆ ಕಡಿತಗೊಳಿಸಬಹುದು. ಕೊರೊನಾವೈರಸ್ ರೋಗಿಗಳ ಚಿಕಿತ್ಸೆಗಾಗಿ ಭಾರತದ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ಕೋವಿಡ್-19ಗೆ ರೆಮ್ಡೆಸಿವಿರ್ ಬಳಕೆಗೆ ಅನುಮೋದನೆ ನೀಡಿತ್ತು.
ಕೊರೋನಾ ವೈರಸ್ RNA ಪಾಲಿಮರೇಸ್ ಎಂಬ ಕಿಣ್ವದ ಸಹಾಯದಿಂದ ಮಾನವನ ದೇಹ ಸೇರುತ್ತದೆ. ಇಲ್ಲಿಂದ ಮಾನವನ ದೇಹದ ಮೇಲೆ ಪರಿಣಾಮ ಬೀರಲು ಆರಂಭಿಸುತ್ತದೆ. ಆದರೆ, ರೆಮ್ಡೆಸಿವಿರ್ ಈ ಕಿಣ್ವವನ್ನು ಪ್ರತಿಬಂಧಿಸುತ್ತದೆ ಮತ್ತು ವೈರಸ್ ಪುನರಾವರ್ತನೆಯಾಗುವುದನ್ನು ನಿರ್ಬಂಧಿಸುತ್ತದೆ.
ರೆಮ್ಡೆಸಿವಿರ್ ಔಷಧಿಯನ್ನು ಕೊರೋನಾ ಸೋಂಕಿಗೊಳಗಾಗಿ ತೀವ್ರ ಸಮಸ್ಯೆಯನ್ನು ಎದುರಿಸುತ್ತಿರುವವರು, ಆ್ಯಕ್ಸಿಜನ್ ಬೆಂಬಲದಲ್ಲಿರುವ ರೋಗಿಗಳಿಗೆ ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೊರೋನಾ ವಿರುದ್ಧ ಹೋರಾಡಲು ರೆಮ್ಡೆಸಿವಿರ್ ಪ್ರಮುಖ ಔಷಧಿಯಾಗಿದ್ದು, ದೇಶದಲ್ಲಿ ಈಗಾಗಲೇ ಈ ಔಷಧಿಯ ಕೊರತೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಏಪ್ರಿಲ್ 11 ರಂದು ರೆಮ್ಡೆಸಿವಿರ್ ಔಷಧಿ ರಫ್ತ್ತನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.