Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಯಕ್ಷಾಂಗಣದಿಂದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ: ಎಂ.ಕೆ. ರಮೇಶಾಚಾರ್ಯರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ…

ತಾಳಮದ್ದಳೆ ಸಪ್ತಾಹ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ...

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ. ಮತ್ತು ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಹತ್ತನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ನೀಡುವ ಯಕ್ಷಾಂಗಣ ಗೌರವ ಪ್ರಶಸ್ತಿಗೆ 2021-22ನೇ ಸಾಲಿನಲ್ಲಿ ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ ಮತ್ತು ಪ್ರಸಂಗಕರ್ತ ಎಂ.ಕೆ.ರಮೇಶ ಆಚಾರ್ಯ ಆಯ್ಕೆಯಾಗಿದ್ದಾರೆ. ನವೆಂಬರ 21ರಿಂದ 27ರವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗುವ ಯಕ್ಷಾಂಗಣ ದಶಮಾನ ಸಡಗರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಎಂ ಕೆ ರಮೇಶ ಆಚಾರ್ಯ:
         ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಸ್ತ್ರೀ ಪಾತ್ರಧಾರಿಗಳಲ್ಲಿ ಎಂ.ಕೆ.ರಮೇಶಾಚಾರ್ಯ ಪ್ರಮುಖರು. ತೀರ್ಥಹಳ್ಳಿ ಸಮೀಪ ಮಂಗಳಾಗಾರದಲ್ಲಿ ಕೃಷ್ಣಾಚಾರ್ಯ – ರುಕ್ಮಿಣಿಯಮ್ಮ ದಂಪತಿಗೆ 1949,ಅಕ್ಟೋಬರ್ 31 ರಂದು ಜನಿಸಿದ ರಮೇಶ ಆಚಾರ್ಯ ತಮ್ಮ ತಂದೆಯವರ ಶ್ರೀ ಜಗದಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಹಿಷಿಯಲ್ಲಿ 13ನೇ ವಯಸ್ಸಿನಲ್ಲೇ ತಿರುಗಾಟ ಆರಂಭಿಸಿದರು. ಬಳಿಕ ಗುರು ವೀರಭದ್ರ ನಾಯಕರಿಂದ ಬಡಗಿನ ನಾಟ್ಯ ಕಲಿತು ಮಂದಾರ್ತಿ ಮೇಳ ಸೇರಿದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೆಂಕಿನ ನಾಟ್ಯಾಭ್ಯಾಸ ಮಾಡಿ ಮೂರು ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. 1976ರಲ್ಲಿ ಸುರತ್ಕಲ್ ಮೇಳ ಸೇರಿ ಶೇಣಿ,ತೆಕ್ಕಟ್ಟೆ,ಅಗರಿ,ಪದ್ಯಾಣರ ಒಡನಾಟದಲ್ಲಿ ಸತತ 24 ವರ್ಷ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ ಜನಪ್ರಿಯರಾದರು.
         ದಾಕ್ಷಾಯಿಣಿ, ಕೈಕೆ, ಮಂಡೋದರಿ, ದಮಯಂತಿ, ಸತ್ಯಭಾಮೆ,ರುಕ್ಮಿಣಿ, ಶಶಿಪ್ರಭೆ, ಮೋಹಿನಿ, ತಾರೆ,ಚಂದ್ರಮತಿ, ಅಂಬೆ, ದೇವಯಾನಿ, ಸೀತೆ, ದ್ರೌಪದಿ, ಸುಭದ್ರೆ,ಪ್ರಭಾವತಿ, ವಾಸವದತ್ತೆ, ಶಾಂತಲೆ, ಮಾತಂಗಿ ಮುಂತಾದ ಪಾತ್ರಗಳಲ್ಲಿ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರ ಮನಗೆದ್ದರು.ಯಕ್ಷಗಾನ ಪ್ರಸಂಗ ರಚನೆಯಲ್ಲೂ ಅಪಾರ ಪರಿಣತಿ ಸಾಧಿಸಿದ ರಮೇಶಾಚಾರ್ಯರು ಅನಸೂಯೋಪಾಖ್ಯಾನ, ಶ್ರೀಕೃಷ್ಣ ತುಲಾಭಾರ, ಸಮಗ್ರ ವಿಶ್ವಾಮಿತ್ರ,ಮಹಾಮಾತೆ ಕುಂತಿ, ಸುರಥ ಚಿತ್ರಾಂಗದ, ನಾಟ್ಯರಾಣಿ ಶಾಂತಲಾ, ಛತ್ರಪತಿ ಶಿವಾಜಿ, ಸತ್ಯಾಂತರಂಗ ಮೊದಲಾದ ಸ್ವತಂತ್ರ ಪ್ರಸಂಗಗಳಲ್ಲದೆ 20 ಕ್ಕೂ ಮಿಕ್ಕಿ ಕ್ಷೇತ್ರ ಮಹಾತ್ಮೆಗಳು, 50ಕ್ಕೂ ಮಿಕ್ಕಿದ ಕಾಲ್ಪನಿಕ ಕನ್ನಡ-ತುಳು ಪ್ರಸಂಗಗಳನ್ನು ರಚಿಸಿ ಖ್ಯಾತರಾದರು.
      ತೆಂಕಿನಲ್ಲಿ 33 ವರ್ಷ ಹಾಗೂ ಬಡಗಿನಲ್ಲಿ 24 ವರ್ಷ ಸೇರಿದಂತೆ ಒಟ್ಟು 57 ವರ್ಷ ತಿರುಗಾಟ ಮಾಡಿರುವ ಎಂ.ಕೆ. ಮಂದಾರ್ತಿ, ಧರ್ಮಸ್ಥಳ, ಸಾಲಿಗ್ರಾಮ, ನೀಲಾವರ, ಮಂಗಳಾದೇವಿ, ತಳಕಲ, ಸುಂಕದಕಟ್ಟೆ, ಹನುಮಗಿರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಯಕ್ಷಗಾನ ತಾಳಮದ್ದಳೆಯಲ್ಲೂ ಸಮರ್ಥ ಅರ್ಥಧಾರಿಯಾಗಿರುವ ಅವರು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ಬಾನುಲಿ ತಂಡದೊಂದಿಗೆ ಕಳೆದ 30 ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
      ಪಾತಾಳ ಪ್ರಶಸ್ತಿ,ಶೇಣಿ ಜನ್ಮ ಶತಾಬ್ದಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಜಾನಪದ ಶ್ರೀ, ಪಟ್ಟಾಜೆ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಕಡಂದೇಲು ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿಗಳು ಅವರಿಗೆ ಸಂದಿವೆ. 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶಾಚಾರ್ಯರಿಗೆ 2021 ಅಕ್ಟೋಬರ 2ರಂದು ಉಡುಪಿಯಲ್ಲಿ ಸಾರ್ವಜನಿಕ ಸನ್ಮಾನ ಮತ್ತು ‘ಯಕ್ಷಾಂಗನೆ’ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ. ಪತ್ನಿ ವಿಶಾಲಾಕ್ಷಿ ಮಕ್ಕಳಾದ ಮನೋಜ,ಆಶಾಲತಾ, ತನುಜಾ ಇವರನ್ನೊಳಗೊಂಡ ಸಂತೃಪ್ತ ಸಂಸಾರ ಅವರದು.
ಪ್ರಶಸ್ತಿ ಪ್ರದಾನ:
   ನವೆಂಬರ್ 27ರಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗುವ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಬಳಿಕ ‘ಸಪ್ತ ವಿಜಯ’ ಸರಣಿಯ ಕೊನೆಯ ಪ್ರಸಂಗ ‘ಯಕ್ಷಲೋಕ ವಿಜಯ’ ತಾಳಮದ್ದಲೆ ಜರಗುವುದು ಎಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.

Related Articles

Back to top button