ಮೀನುಗಾರರ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧ- ಸಚಿವ ಕೋಟ ಶ್ರೀನಿವಾಸ ಪೂಜಾರಿ…..
ಪುತ್ತೂರು: ಮೀನುಗಾರರ ಸರ್ವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಬದ್ದವಾಗಿದ್ದು, ಬಂದರು ಮತ್ತು ಜೆಟ್ಟಿಗಳ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗುಜರಾತ್‍ಗಳ ಸ್ಥಿತಿಗತಿ ಅಧ್ಯಯನಕ್ಕೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗುವುದು. ಈ ತಂಡವು 4 ರಾಜ್ಯಗಳಲ್ಲಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿಯನ್ನು ಆಧರಿಸಿ ಮುಂದಿನ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ರಾಜ್ಯ ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮವಾರ ಪುತ್ತೂರಿಗೆ ಆಗಮಿಸಿದ ಸಂದರ್ಭದಲ್ಲಿ ಪುತ್ತೂರು ಮಂಡಲ ಬಿಜೆಪಿ ವತಿಯಿಂದ ನೀಡಲಾದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ಮುಜರಾಯಿ ಇಲಾಖೆಯ ವತಿಯಿಂದ ಎಲ್ಲಾ ದೇವಸ್ಥಾನದಲ್ಲಿ ಈ- ಹುಂಡಿ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಇದರಿಂದಾಗಿ ಪ್ರತಿದಿನ ಹುಂಡಿಯಲ್ಲಿ ಸಂಗ್ರಹವಾಗುತ್ತಿರುವ ಹಣ ಮತ್ತು ಚಿನ್ನಾಭರಣಗಳ ಸಮರ್ಪಕ ಮಾಹಿತಿ ಇಲಾಖೆಗೆ ಲಭ್ಯವಾಗಲಿದೆ. ಅಲ್ಲದೆ ದ.ಕ. ಜಿಲ್ಲೆಯ ಕೆಲವು ಪ್ರಮುಖ ದೇವಳಗಳನ್ನು ಕೇಂದ್ರವಾಗಿಟ್ಟುಕೊಂಡು ಸರಕಾರಿ ಗೋಶಾಲೆ ನಿರ್ಮಿಸಲಾಗುವುದು. ಅದೇ ರೀತಿ ಯಶಸ್ವಿಯಾಗಿ ಗೋಶಾಲೆ ನಡೆಸುತ್ತಿರುವ ಮಠ ಮಂದಿರಗಳಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲಾಗುವುದು ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಕೊಲೆಯಾದ ಯುವಕ ಕಾರ್ತಿಕ್ ಮೇರ್ಲ ಅವರ ಮನೆ ಭೇಟಿಗೆ ಸಚಿವರು ಆಗಮಿಸಿದ್ದಾರೆ. ಕಾರ್ತಿಕ್ ಹತ್ಯೆಯ ತನಿಖೆಯನ್ನು ಅಗತ್ಯ ಬಿದ್ದರೆ ಸಿಒಡಿಗೂ ಒಪ್ಪಿಸಲು ಸರಕಾರ ಹಿಂದೆ ಸರಿಯುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಪುತ್ತೂರು ಬಿಜೆಪಿ ಮಂಡಲ ಸಮಿತಿ ವತಿಯಿಂದ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.
ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಜೀವಂಧ ಜೈನ್, ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.