ಕೋವಿಡ್-19 :ಅನಿವಾಸಿ ಕನ್ನಡಿಗರಿಗೆ ಆಸರೆಯಾಗುತ್ತಿರುವ ಕೆಸಿಎಫ್ ಒಮಾನ್….
ಒಮಾನ್: ಕೋವಿಡ್-19 ಕೊರೊನಾ ವೈರಸ್ ನಿಂದ ಜಗತ್ತೇ ತತ್ತರಿಸಿಹೋಗಿದ್ದು, ಒಮಾನಿನ ಮಸ್ಕತ್ ಗವರ್ನರೇಟ್ ಸಂಪೂರ್ಣ ಲಾಕ್ ಡೌನ್ ಆಗಿದೆ ಹಾಗೂ ಒಮಾನಿನಾದ್ಯಂತ ಜನರು ಬೀದಿಗಿಳಿಯಲು ಬಯಪಡುತ್ತಿದ್ದಾರೆ. ಕೆಲವು ಕಂಪೆನಿಗಳು, ಅಂಗಡಿಗಳು ಮುಚ್ಚಲ್ಪಟ್ಟ ರೀತಿಯಲ್ಲಿದ್ದು ವ್ಯಾಪಾರಸ್ಥರು ನಷ್ಟ ಹೊಂದುತ್ತಿದ್ದು, ಈ ಎಲ್ಲಾ ಕಡೆಯಲ್ಲೂ ಕೆಲಸ ಮಾಡುತ್ತಿರುವ ಅನಿವಾಸಿಗರು, ಅದರಲ್ಲೂ ಅನಿವಾಸಿ ಕನ್ನಡಿಗರೂ ಕಳೆದ ಒಂದು ತಿಂಗಳಿನಿಂದ ತಮ್ಮ ರೂಮ್ ಗಳಲ್ಲೇ ಕಾಲ ಕಳೆಯುವ ಪರಿಸ್ಥಿತಿಯು ಎದುರಾಗಿದೆ. ಅದಲ್ಲದೇ ಊಟ ಮಾಡಲು ಕೂಡಾ ಹಣ ಅಗತ್ಯ ವಸ್ತುಗಳು ಸಿಗದೇ ಕಷ್ಟ ಅನುಭವಿಸುತ್ತಿದ್ದಾರೆ.
ಇಂತಹವರನ್ನು ಗರುತಿಸಿ ನೆರವಿನ ಹಸ್ತ ಚಾಚಲು ಕೊಲ್ಲಿ ರಾಷ್ಟ್ರಾದ್ಯಂತ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಕರ್ನಾಟಕ ಕಲ್ಚರಲ್ ಫೌಂಡೇಷನ್ ಅಂತರಾಷ್ಟ್ರೀಯ ಸಮಿತಿಯು ಸಹಾಯವಾಣಿ ಪ್ರಾರಂಭಿಸಿದೆ. ಹಾಗೆಯೇ ಸಹಾಯ ಮಾಡಲು ಕೆಸಿಎಫ್ ಸ್ವಯಂ ಸೇವಕರು ಸದಾ ಸನ್ನದ್ಧರಾಗಿ ನಿಂತಿದ್ದಾರೆ.
ಒಮಾನಿನಲ್ಲಿ ಕೆಸಿಎಫ್ ಕಾರ್ಯಕರ್ತರು ಈಗಾಗಲೇ ಹಲವು ಕರೆಗಳನ್ನು ಸ್ವೀಕರಿಸಿ ಹಾಗೂ ಹಲವಾರು ಕನ್ನಡಿಗರನ್ನು ಗುರುತಿಸಿ ದಿನಸಿ ಸಾಮಾನುಗಳು, ಅಗತ್ಯ ವಸ್ತುಗಳನ್ನು ಗೌಪ್ಯವಾಗಿ ತಲುಪಿಸಿ ಕೊಡುತ್ತಿದ್ದಾರೆ. ಇದರೊಂದಿಗೆ ವೈದ್ಯಕೀಯ ಸಹಾಯ ಮುಂತಾದವುಗಳಿಗೆ ನೆರವು ನೀಡಲಾಗುತ್ತಿದೆ.ದಿನದ 24 ಗಂಟೆಯೂ ಯಾವುದೇ ತುರ್ತು ಸೇವೆಗಳಿಗೆ ಕೆಸಿಎಫ್ ಸ್ವಯಂ ಸೇವಕರು ಸನ್ನದ್ದರಾಗಿ ಬಹುದೊಡ್ಡ ಆಸರೆಯಾಗಿ ನಿಂತಿದ್ದಾರೆ.
ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಕಳೆದ ಏಳು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಒಮಾನಿನಲ್ಲಿ 6 ವರ್ಷಗಳಿಂದ ವಿವಿಧ ಝೋನ್ ಗಳಾಗಿ (ಮಸ್ಕತ್, ಸೀಬ್, ಬೌಶರ್, ನಿಝ್ವ, ಸೊಹಾರ್, ಬುರೈಮಿ, ಸಲಾಲ) ಕಾರ್ಯಾಚರಿಸುತ್ತಿದ್ದು, ಜಾತಿ ಮತ ಭೇದ ನೋಡದೆ ಎಲ್ಲಾ ಸಮಯದಲ್ಲಿಯೂ ಕೆಸಿಎಫ್ ಕನ್ನಡಿಗರಿಗೆ ಸಾಂತ್ವನ ಹಸ್ತವನ್ನು ಚಾಚಿದ್ದು, ಸದಾ ಅನಿವಾಸಿ ಕನ್ನಡಿಗರಿಗೆ ಆಶಾ ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ.
ಒಮಾನಿನ ಸಹಾಯವಾಣಿ ನಂಬರ್ ಹೀಗಿದೆ: +968 92 979 137