ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತರ್ಜಾಲ ಗೋಷ್ಠಿ …
ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ ಪುತ್ತೂರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಬೆಳಗಾವಿ ಮತ್ತು ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಭಾಷೆಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಸಾಧಕಗಳು ಮತ್ತು ಸವಾಲುಗಳು ಎನ್ನುವ ವಿಷಯದ ಬಗ್ಗೆ ಅಂತರ್ಜಾಲ ಗೋಷ್ಠಿ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ದಾವಣಗೆರೆಯ ಬಿಐಇಟಿ ಸಂಸ್ಥೆಯ ನಿರ್ದೇಶಕ ಪ್ರೊ..ವೈ.ವೃಷಭೇಂದ್ರಪ್ಪ, ಮೈಸೂರು ವಿಶ್ವವಿದ್ಯಾನಿಲಯದ ಪ್ರಾಣಿಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊಫೆಸರ್ ಡಾ.ಶ್ರೀಧರ್ ನಾರಾಯಣ ಹೆಗ್ಡೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಯುನಿವರ್ಸಿಟಿ ಕಂಪ್ಯೂಟರ್ ಸೆಂಟರಿನ ಪೂರ್ವ ಮುಖ್ಯಸ್ಥ ಡಾ.ಎ.ಎಂ.ಸುಧಾಕರ್ ಗೋಷ್ಟಿಯನ್ನು ನಡೆಸಿಕೊಟ್ಟರು.
ತಮ್ಮ ನಿಲುವನ್ನು ತಿಳಿಸುತ್ತಾ ಮಾತನಾಡಿದ ಪ್ರೊ..ವೈ.ವೃಷಭೇಂದ್ರಪ್ಪ ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುವ ನಿರ್ಧಾರ ಒಳ್ಳೆಯದು ಎಂದರು. ಶಿಕ್ಷಣದ ಮಾಧ್ಯಮವನ್ನು ಆಯ್ಕೆ ಮಾಡುವ ನಿರ್ಧಾರವನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಿಡಬೇಕು ಮತ್ತು ಅವರ ನಿರ್ಧಾರಕ್ಕೆ ತಕ್ಕಂತೆ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದರು. ಇಂಜಿನಿಯರಿಂಗ್ ಪಠ್ಯ ಕ್ರಮವನ್ನು ತರ್ಜುಮೆ ಮಾಡುವ ಕೆಲಸ ತುಂಬಾ ಸವಾಲಿನದ್ದು ಅದಕ್ಕಾಗಿ ವಿಜ್ಞಾನ ಪದಕೋಶಗಳ ತಯಾರಿ ಮೊದಲಿಗೆ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಇನ್ನೊರ್ವ ಶಿಕ್ಷಣ ತಜ್ಞ ಡಾ.ಶ್ರೀಧರ ನಾರಾಯಣ ಹೆಗ್ಡೆ ಮಾತನಾಡಿ, ಮಾತೃ ಭಾಷಾ ಶಿಕ್ಷಣದಲ್ಲಿ ವಿದ್ಯಾರ್ಥಿಯ ಗ್ರಹಿಕೆ ಹೆಚ್ಚಾಗುತ್ತದೆ. ತಕ್ಷಣಕ್ಕೆ ಅಲ್ಲದಿದ್ದರೂ ಕ್ರಮೇಣ ಇದಕ್ಕೆ ಬೇಡಿಕೆ ಬರಬಹುದು ಎಂದರು. ಕನ್ನಡದಲ್ಲಿ ಕಲಿತವರಿಗೆ ಅನ್ಯರಾಜ್ಯಗಳಲ್ಲಿ ಅಥವಾ ಇಂಗ್ಲಿಷ್ ಮಯವಾದ ಕಂಪೆನಿಗಳಲ್ಲಿ ಉದ್ಯೋಗ ಸಿಗಬಹುದೇ ಎನ್ನುವ ಭೀತಿ ಕಾಡಬಹುದು. ಆದರೆ ಉದ್ಯೋಗಕ್ಕೆ ಭಾಷೆ ಮುಖ್ಯವಲ್ಲ ಬದಲಾಗಿ ವಿಷಯದ ಬಗೆಗಿನ ಜ್ಞಾನ ಗಣನೆಗೆ ಬರುತ್ತದೆ ಎಂದರು. ಆಂಗ್ಲ ಶಬ್ಧಗಳಿಗೆ ಸಮಾನಾಂತರ ಅರ್ಥ ಕೊಡುವ ಕನ್ನಡ ಶಬ್ಧಗಳಿಗೆ ಕೊರತೆ ಇಲ್ಲ. ಭಾಷಾಂತರಿಸುವಾಗ ಶಿಕ್ಷಣ ತಜ್ಞರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಅಗತ್ಯ ಎಂದರು.
ಮತ್ತೊಬ್ಬ ಸಂಪನ್ಮೂಲ ವ್ಯಕಿ ಡಾ.ಎ.ಎಂ.ಸುಧಾಕರ್ ಮಾತನಾಡಿ ಆಸಕ್ತಿ ಇದ್ದರೆ ಯಾವುದೂ ತೊಡಕಲ್ಲ. ಹೀಗಾಗಿ ಕನ್ನಡ ಭಾಷಾ ಶಿಕ್ಷಣದ ಮೇಲೆ ವಿದ್ಯಾರ್ಥಿಗಳಿಗೆ ಆಸಕ್ತಿ ಹುಟ್ಟುವಂತೆ ಮಾಡಬೇಕು. ಅದಕ್ಕಾಗಿ ಪೂರಕ ಹಾಗೂ ಕ್ಲಿಷ್ಟವಲ್ಲದ ಪಠ್ಯಕ್ರಮವನ್ನು ತಯಾರಿಸಬೇಕು ಎಂದರು. ಸಾಕಷ್ಟು ಕಮ್ಮಟಗಳು, ಅರಿವು ಮೂಡಿಸುವ ವಿಚಾರ ಸಂಕಿರಣಗಳು ನಡೆಯಬೇಕು. ಶಿಕ್ಷಕರುಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ನುಡಿದರು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಪ್ರಸ್ತಾವನೆಗೈದರು. ವಿವೇಕಾನಂದ ಸ್ಕೂಲ್ ಆಫ್ ಮೆನೇಜ್ಮೆಂಟ್ ಸ್ಟಡೀಸ್ನ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಸಮನ್ವಯಕಾರರಾಗಿ ಗೋಷ್ಟಿಯನ್ನು ಮುನ್ನಡೆಸಿದರು. ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ..ಶ್ರೀಕಾಂತ್ ರಾವ್ ಕರ್ಯಕ್ರಮವನ್ನು ಸಂಯೋಜಿಸಿದರು.
ಶ್ರೀರಾಮ ಪದವಿ ಕಾಲೇಜು ಕಲ್ಲಡ್ಕದ ಪ್ರಾಂಶುಪಾಲರು ಹಾಗೂ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಕರ್ನಾಟಕ ಉತ್ತರ ಮತ್ತು ದಕ್ಷಿಣ ಇದರ ಸಂಯೋಜಕರೂ ಆದ ಪ್ರೊ.ಕೃಷ್ಣಪ್ರಸಾದ್.ಕೆ.ಎನ್ ಸ್ವಾಗತಿಸಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ನ ಪ್ರಾಂಶುಪಾಲೆ ಹಾಗೂ ವಿದ್ಯಾಭಾರತಿ ಉಚ್ಚ ಶಿಕ್ಷಣ ಸಂಸ್ಥಾನ ಮಂಗಳೂರು ವಿಭಾಗದ ಸಂಯೋಜಕಿ ಡಾ.ಶೋಬಿತಾ ಸತೀಶ್ ವಂದಿಸಿದರು. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಹರಿಪ್ರಸಾದ್.ಡಿ ಕಾರ್ಯಕ್ರಮ ನಿರ್ವಹಿಸಿದರು.