ಸಂಸದೆ ಬಾನ್ಸುರಿ ಸ್ವರಾಜ್ ಅವರಿಗೆ ಕ್ಯಾಂಪ್ಕೋ ಚಟುವಟಿಕೆಗಳ ಕುರಿತು ಮಾಹಿತಿ…
ಪುತ್ತೂರು:ಸಂಸತ್ ಸದಸ್ಯೆ ಮತ್ತು ಸುಪ್ರಸಿದ್ಧ ಸುಪ್ರೀಂ ಕೋರ್ಟ್ ವಕೀಲರಾದ ಬಾನ್ಸುರಿ ಸ್ವರಾಜ್ ಅವರು “ವಿಕಸಿತ ಭಾರತ” ಕುರಿತು ಪ್ರೇರಣಾತ್ಮಕ ಭಾಷಣ ಮಾಡಲು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಫೆಬ್ರವರಿ 7 ರಂದು ಭೇಟಿ ನೀಡಿದರು.
ಅವರ ಭೇಟಿಯ ವೇಳೆ, ಕ್ಯಾಂಪ್ಕೋ ನಿರ್ದೇಶಕ, ನ್ಯಾಯವಾದಿ ಮುರಳಿ ಕೃಷ್ಣ ಕೆ.ಎನ್. ಅವರು ಬಾನ್ಸುರಿ ಸ್ವರಾಜ್ ಅವರಿಗೆ ಕ್ಯಾಂಪ್ಕೋ ಚಾಕೊಲೇಟ್ ನೀಡಿ ಶುಭಾಶಯ ಕೋರಿದರು. ನಂತರ ಅವರು ಕ್ಯಾಂಪ್ಕೋ ಮತ್ತು ಅದರ ಚಟುವಟಿಕೆಗಳ ಕುರಿತು ವಿವರಿಸಿದರು. ಜೊತೆಗೆ ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆ (WHO) ವತಿಯಿಂದ ಪ್ರಸ್ತಾಪಿಸಲಾದ ಅಡಿಕೆ ಸೇವನೆಯ ನಿಯಂತ್ರಣ ಮಾರ್ಗಸೂಚಿಗಳಿಂದ ಅಡಿಕೆ ರೈತರು ಎದುರಿಸುತ್ತಿರುವ ವಿವಿಧ ಸವಾಲುಗಳ ಕುರಿತು ವಿವರಿಸಿದರು.
ಕ್ಯಾಂಪ್ಕೋ ನಿರ್ದೇಶಕ ಮುರಳಿ ಕೃಷ್ಣ ಅವರು WHO ಸಂಸ್ಥೆಯ ಉಪಕ್ರಮಗಳು ಮತ್ತು ಈ ಮಾರ್ಗಸೂಚಿಗಳು ಈ ಪ್ರದೇಶದ ಸಾವಿರಾರು ರೈತರ ಜೀವನೋಪಾಯದ ಮೇಲೆ ಬೀರುವ ಪರಿಣಾಮದ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಸಂಸತ್ ಸದಸ್ಯೆ ಬಾನ್ಸುರಿ ಸ್ವರಾಜ್ ಅವರು ಈ ವಿಷಯವನ್ನು ಸಂಸತ್ ನಲ್ಲಿ ಮತ್ತು ವಾಣಿಜ್ಯ ಮತ್ತು ಕೃಷಿ ಸಚಿವಾಲಯದಲ್ಲಿ ಸಂಸದರಾದ ಬೃಜೇಶ್ ಚೌಟ ಮತ್ತು ಇತರ ನಾಯಕರ ನೇತೃತ್ವದಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ.ಎಸ್.ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ರವೀಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು.





