ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸುವಲ್ಲಿ ಯುವಜನರ ಕೊಡುಗೆ ಅಗತ್ಯ- ಬಾನ್ಸುರಿ ಸ್ವರಾಜ್…

ಪುತ್ತೂರು: ಭಾರತವು ಅತಿ ಹೆಚ್ಚು ಯುವಜನರನ್ನು ಮತ್ತು ಮಾನವ ಸಂಪನ್ಮೂಲವನ್ನು ಹೊಂದಿರುವ ದೇಶ. ಈ ಯುವ ಶಕ್ತಿಯು ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಸೂಪರ್ ಪವರ್ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬೇಕು ಎಂದು ದೆಹಲಿ ಲೋಕಸಭಾ ಕ್ಷೇತ್ರದ ಸಂಸದೆ ಬಾನ್ಸುರಿ ಸ್ವರಾಜ್ ಹೇಳಿದರು.
ಅವರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಾವರ್ಕರ್ ಸಭಾಭವನದಲ್ಲಿ ಫೆ.7 ರಂದು ನಡೆದ ಭಾರತದ ಭವಿಷ್ಯದ ದೃಷ್ಟಿಕೋನದ ಪರಿಕಲ್ಪನೆ ವಿಕಸಿತ ಭಾರತ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಈ ವಿಷಯದ ಬಗೆಗಿನ ವಿಚಾರಸಂಕಿರಣದಲ್ಲಿ ಮಾತಾಡಿದರು. ನಮ್ಮ ಪೂರ್ವಜರ ಕಠಿಣ ಪರಿಶ್ರಮ ಮತ್ತು ತ್ಯಾಗಗಳಿಂದ ನಮ್ಮ ದೇಶವು ಸುಭದ್ರವಾಗಿದೆ ಮತ್ತು ನಾವು ಸಂತೋಷವಾಗಿದ್ದೇವೆ ಎಂದರು. ಇಂದು ಭಾರತವು ಪ್ರಪಂಚದ ಉತ್ಪಾದನಾ ಕೇಂದ್ರವಾಗಿ ಬದಲಾಗುತ್ತಿದೆ. ಇತ್ತೀಚೆಗೆ ಮಂಡಿಸಲಾದ ಬಜೆಟ್‍ನಲ್ಲಿ ಹುಡುಗಿಯರಿಗೆ ಉತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ಮಹಿಳಾ ಹಾಸ್ಟೆಲ್‍ಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಅಲ್ಲದೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಸರ್ಕಾರದ ಮುದ್ರಾ ಯೋಜನೆಯು ಸಣ್ಣ ನವೋದ್ಯಮಗಳಿಗೆ ಸಹಾಯ ನೀಡುತ್ತದೆ. ಇದನ್ನು ಬಳಸಿಕೊಂಡು ಯುವಕರು ಉದ್ಯಮಿಗಳಾಗುವತ್ತ ಮನ ಮಾಡಬೇಕು ಎಂದರು. ಉಳಿತಾಯವು ಯುವಕರ ಆದ್ಯತೆಯಾಗಬೇಕು ತನ್ಮೂಲಕ ಆರ್ಥಿಕ ಸ್ಥಿತಿಗತಿಗೆ ತಮ್ಮ ಕೊಡುಗೆಯನ್ನು ನೀಡುವುದಲ್ಲದೆ ರಾಷ್ಟ್ರ ರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕು ಎಂದರು. ವಿದ್ಯಾರ್ಥಿಗಳ ಜತೆ ಸಂವಹನವನ್ನು ನಡೆಸಿ ಅವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದರು.
ಈ ಸಂದರ್ಭದಲ್ಲಿ ಬಾನ್ಸುರಿ ಸ್ವರಾಜ್ ಅವರನ್ನು ಗೌರವಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕಿ ಡಾ.ಸುಧಾ.ಎಸ್.ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಅಚ್ಯುತ ನಾಯಕ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ನಿರ್ದೇಶಕರಾದ ರವಿಕೃಷ್ಣ.ಡಿ.ಕಲ್ಲಾಜೆ, ವಿದ್ಯಾ.ಎಸ್.ಗೌರಿ, ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಚಾಲಕ ರವೀಂದ್ರ ರೈ, ಕ್ಯಾಂಪ್ಕೋ ನಿರ್ದೇಶಕ ಮುರಳೀಕೃಷ್ಣ, ವಿವಿಧ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಥಮ ಎಂಬಿಎ ವಿಭಾಗದ ವಿದ್ಯಾರ್ಥಿನಿ ಶ್ರೀದೇವಿ ಮತ್ತು ಬಳಗದವರು ಪ್ರಾರ್ಥಿಸಿದರು. ತೃತೀಯ ಎಐಎಂಎಲ್ ವಿಭಾಗದ ವಿದ್ಯಾರ್ಥಿ ಶ್ರೀನಿವಾಸ್ ಹೆಗ್ಡೆ ಸ್ವಾಗತಿಸಿದರು. ಡಾ.ಸುಧಾ.ಎಸ್.ರಾವ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ನೀಮಾ ಎಚ್ ವಂದಿಸಿದರು.

bansuri swaraj (2)

bansuri swaraj (3)

Related Articles

Back to top button