ಸುಳ್ಯ- ಖಾಸಗಿ ಶಿಕ್ಷಣ ಸಂಸ್ಥೆಗಳ ಫೀಸು ಸಮಸ್ಯೆ ಬಗೆಹರಿಸುವಂತೆ ಆಶ್ರಯ ಫೌಂಡೇಶನ್ ಒತ್ತಾಯ…

ಸುಳ್ಯ : ದೇಶದಾದ್ಯಂತ ಕೊರೊನ ಅಟ್ಟಹಾಸ ಮಾನವ ಸಂಕುಲವನ್ನು ತಲ್ಲಣಗೊಳಿಸಿದ್ದರೆ ಸುಳ್ಯದ ಕೆಲವು ಖಾಸಗಿ ಶಾಲೆಗಳು ಇದರ ಪರಿವೇ ಇಲ್ಲದಂತೆ ವರ್ತಿಸುತ್ತಿದೆ.ಕಳೆದ ಒಂದು ವರ್ಷವಿಡೀ ಕೇವಲ ಆನ್ ಲೈನ್ ಕ್ಲಾಸ್ ನಡೆಸುವ ಮೂಲಕ ಬಡ ಪೋಷಕರ ಹಣವನ್ನು ಸುಲಿಗೆ ಮಾಡಿ ಅವರ ಜೋಳಿಗೆಯನ್ನು ತುಂಬಿಸಿಕೊಂಡರು. ಆದರೆ ಈ ಬಡ ಪೋಷಕರು ಈ ಹಣವನ್ನು ಎಲ್ಲಿಂದ ಭರಿಸುವರೆಂದು ತಿಳಿದುಕೊಳ್ಳುವ ಒಂದು ಸಣ್ಣ ಮನಸ್ಸನ್ನು ಕೂಡ ಇವರು ತೋರಲಿಲ್ಲ. ಇದೀಗ ಕೋವಿಡ್ ಎರಡನೆಯ ಅಲೆ ಲಕ್ಷಾಂತರ ಮನುಷ್ಯ ಜೀವದ ಪ್ರಾಣವನ್ನೇ ತೆಗೆದಿದ್ದರೆ, ಈ ಖಾಸಗಿ ಶಾಲೆಗಳು ಮತ್ತೊಮ್ಮೆ ತಮ್ಮ ಬೊಕ್ಕಸ ತುಂಬಿಸುವ ಪ್ರವೃತಿಯನ್ನು ಪ್ರಾರಂಭಿಸಿದೆ. ಮಕ್ಕಳು ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಇದ್ದರೂ, ಮತ್ತೊಮ್ಮೆ ಆನ್ ಲೈನ್ ಕ್ಲಾಸ್ ಎಂಬ ಮಾಯಾಜಿಂಕೆಯನ್ನು ಮುಂದಿಟ್ಟು, ಶಾಲೆಯ ಫೀಸು ಕಟ್ಟಲು ಮೊಬೈಲ್ ಗಳಲ್ಲಿ ಟೆಕ್ಸ್ಟ್ ಮೆಸೇಜ್ ಗಳ ಯುದ್ಧವನ್ನು ಆರಂಭಿಸಿದ್ದಾರೆ. ಒಬ್ಬ ಸಾಮಾನ್ಯ ಕುಟುಂಬದ ಪರಿಸ್ಥಿತಿ ಈ ಕೊರೊನ ಕಾಲದಲ್ಲಿ ಅರಿತವರಿಗೆ ‌ಗೊತ್ತು.ವ್ಯಾಪಾರ,‌ ವ್ಯವಹಾರ ಇಲ್ಲ. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿರುವ ಈ ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಕಳುಹಿಸುವ ಶಿಕ್ಷಣ ಸಂಸ್ಥೆಗಳ ಫೀಸು, ಡೊನೇಷನ್ ಕಟ್ಟಲು ಸಾದ್ಯವೇ?. ಹಲವಾರು ‌ಶಿಕ್ಷಣ ಸಂಸ್ಥೆಗಳು ಹೆಚ್ಚಿನ ವರಮಾನ ತರುವ ಸಂಸ್ಥೆ ಗಳನ್ನು ಹೊಂದಿರುವ ಮ್ಯಾನೇಜ್ ಮೆಂಟ್ ಗೆ ಪ್ರಸ್ತುತ ಸಂದರ್ಭದಲ್ಲಿ ತಮ್ಮ ಒಂದು ವರ್ಷದ ಫೀಸ್ ನ್ನು ಮನ್ನಾ ಮಾಡುವ ಸಹ್ರೃದಯ ಇಲ್ಲದೇ ಹೋದದ್ದು ವಿಪರ್ಯಾಸವೇ ಸರಿ. ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕು, ಈ ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಶ್ರಯ ಫೌಂಡೇಶನ್ ಸುಳ್ಯ ಪತ್ರಿಕಾ ಪ್ರಕಟಣೆಯ ಮೂಲಕ ಒತ್ತಾಯಿಸಿದೆ.

Sponsors

Related Articles

Back to top button