ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ- 2026…
ಮಹಿಳೆಯರಿಂದ ಮಹಿಳೆಯರಿಗಾಗಿ ಇಂದ್ರಜಾಲ ಪ್ರದರ್ಶನ...
ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನ 2026ರ ಅಂಗವಾಗಿ ಕುಂಬಳೆಯ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್ ಹಾಗೂ ನವೋದಯ ಮಹಿಳಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಹಾಗೂ ‘ಕಲಾಸೃಷ್ಟಿ’ ವರೈಟಿ ಎಂಟರ್ಟೈನ್‌ಮೆಂಟ್ ತಂಡದ ನಿರ್ದೇಶಕಿ ಪ್ರೊ. ಮುಬೀನಾ ಪರ್ವೀನ್ ತಾಜ್ (ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು) ಮಹಿಳಾ ದಿನಾಚರಣೆಯ ಥೀಮ್ ಬಣ್ಣಗಳ ಮಹತ್ವವನ್ನು ವಿವರಿಸಿದರು. ಮತ್ತೊಬ್ಬ ಅತಿಥಿ, ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತೆ ಹಾಗೂ ಕಲಾಸೃಷ್ಟಿ ತಂಡದ ನಿರ್ದೇಶಕಿ ಕು. ಶಮಾ ಪರ್ವೀನ್ ತಾಜ್ ಇವರು ಸಮಾಜದಲ್ಲಿ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಮುಬೀನಾ ಪರ್ವೀನ್ ತಾಜ್ ಮತ್ತು ಕು. ಶಮಾ ಪರ್ವೀನ್ ತಾಜ್ ಅವರನ್ನು ನವೋದಯ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು
ವೇದಿಕೆಯಲ್ಲಿ ನವೋದಯ ಗ್ರಂಥಾಲಯ ಮತ್ತು ವಾಚನಾಲಯದ ಅಧ್ಯಕ್ಷರಾದ ಶ್ರೀ ಅನೂಪ್ ರಾಜ್, ಕಾರ್ಯದರ್ಶಿ ಶ್ರೀಮತಿ ಪೂಜಾ ರಥೀಶ್, ಕುಂಬಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಬಾಲ್ಕಿಸ್, ನವೋದಯ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿದ್ಯಾ ನವೀನ್, ಕಾರ್ಯದರ್ಶಿ ಶ್ರೀಮತಿ ಅನ್ನಪೂರ್ಣ, ಹಿರಿಯ ಕಾರ್ಯಕಾರಿ ಸದಸ್ಯೆ ಶ್ರೀಮತಿ ಗೀತಾ, ಹಾಗೂ ನವೋದಯ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಸಂದೀಪ್ ಡಿ’ಸೋಜಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ‘ಮಹಿಳೆಯರಿಗಾಗಿ ಇಂದ್ರಜಾಲ’ ಎಂಬ ವಿಶೇಷ ಮನರಂಜನಾ ಕಾರ್ಯಕ್ರಮದಲ್ಲಿ ಕಲಾಸೃಷ್ಟಿ ತಂಡದ ಮಹಿಳಾ ಜಾದೂಗಾರಿಣಿಯರಾದ ಮುಬೀನಾ ಹಾಗೂ ಶಮಾ ಜಂಟಿಯಾಗಿ ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುವ ಜಾದೂ ಪ್ರದರ್ಶನ ನೀಡಿದರು.






