ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಕೊಡುಗೆ- ಪುತ್ತೂರು ಸರ್ಕಾರಿ ಆಸ್ಪತ್ರೆ ಬಳಿ ಬ್ಯಾರಿಕೇಡ್ ಅಳವಡಿಕೆ….
ಪುತ್ತೂರು: ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಸಂಘಟನೆಯ ವತಿಯಿಂದ ಕೊಡುಗೆಯಾಗಿ ಪುತ್ತೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ 2 ಬ್ಯಾರಿಕೇಡ್‍ಗಳನ್ನು ನೀಡಿದ್ದು, ಇದನ್ನು ನ.25 ರಂದು ಪುತ್ತೂರು ಸಂಚಾರಿ ಠಾಣೆಯ ಎಸ್‍ಐ ಚೆಲುವಯ್ಯ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನಸಾಮಾನ್ಯ ಸಂಕಷ್ಟಗಳಿಗೆ ಸ್ಪಂಧಿಸುವ ಚಿಂತನೆ ಸಂಘಸಂಸ್ಥೆಗಳು ಸೇರಿದಂತೆ ಸಮಾಜದ ಎಲ್ಲಾ ವರ್ಗದಲ್ಲಿಯೂ ಅಗತ್ಯವಾಗಿರಬೇಕು. ಕಷ್ಟದಲ್ಲಿರುವ ಜನತೆಗೆ ಕೈಲಾದ ಸೇವೆ ಮಾಡುವುದು ಮಾನವ ಧರ್ಮವಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನದಟ್ಟಣೆ ಮತ್ತು ಸಂಚಾರ ವ್ಯವಸ್ಥೆ ಕಾಪಾಡಲು 2 ಬ್ಯಾರಿಕೇಡ್ ಕೊಡುಗೆ ನೀಡಿದ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸರ್ಕಾರದ ವ್ಯವಸ್ಥೆಯಲ್ಲಿ ಮಾಡಲಾಗದ ಕೆಲವೊಂದು ವ್ಯವಸ್ಥೆಗಳನ್ನು ಸಾರ್ವಜನಿಕ ಸಂಘಟನೆಗಳ ಸಹಕಾರದಿಂದ ನಡೆಸಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ವಾಹನದಟ್ಟಣೆ ಮತ್ತು ಸಮಸ್ಯೆ ಕಂಡುಬರುವ ದೃಷ್ಟಿಯಿಂದ ಈ ಬ್ಯಾರಿಕೇಡ್ ಗಳು ಹೆಚ್ಚು ಅಗತ್ಯವಿದ್ದು, ಬಪ್ಪಳಿಗೆಯ ಯುವಕರು ಕೊಡುಗೆ ನೀಡುವ ಮೂಲಕ ಇಲ್ಲಿನ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಎಂದು ತಿಳಿಸಿದರು.
ಬಪ್ಪಳಿಗೆ ಮಸ್ಚಿದುನ್ನೂರ್ ಜುಮ್ಮಾ ಮಸೀದಿಯ ಖತೀಬ್ ಅಹ್ಮದ್ ನಯೀಮಿ ಫೈಝಿ ಮಾತನಾಡಿ ಬಪ್ಪಳಿಗೆಯ ಗ್ಲೋಬಲ್ ಫ್ರೆಂಡ್ಸ್ ತಂಡ ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೊಡುಗೆಗಳನ್ನು ನೀಡುತ್ತಿದ್ದಾರೆ. ಇದೀಗ ಬ್ಯಾರಿಕೇಡ್ ನೀಡುವ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಿದ್ದಾರೆ ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಗದೀಶ್ ಮಾತನಾಡಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಕೆಲವು ಸಂದರ್ಭ ವಾಹನದಟ್ಟಣೆಗಳಿಂದ ನಡೆದಾಡಲೂ ಕಷ್ಟವಾಗುತ್ತಿತ್ತು. ಇದೀಗ ಇಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್ ಅತ್ಯುತ್ತಮ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾಜ್ಯೋತಿ, ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದೆರ್ಬೆ, ಬಪ್ಪಳಿಗೆ ಜಮಾಅತ್ ಅಧ್ಯಕ್ಷ ಬಿ.ಎಚ್. ಮುಹಮ್ಮದ್ ಹಾಜಿ, ನಿಕಟಪೂರ್ವ ಅಧ್ಯಕ್ಷ ದಾವೂದ್ ಬಪ್ಪಳಿಗೆ, ಹೆಲ್ಫ್ ಕಮಿಟಿ ಅಧ್ಯಕ್ಷ ರವೂಫ್ ಕೂರ್ನಡ್ಕ, ಗ್ಲೋಬಲ್ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಬಶೀರ್, ಉಪಾಧ್ಯಕ್ಷ ಇಬ್ರಾಹಿಂ, ಅಝೀಝ್ ಬಪ್ಪಳಿಗೆ, ಸಮೀರ್ ಎಚ್.ಎಸ್, ಪುತ್ತೂರು ರೇಂಜ್ ಮದ್ರಸ ಮೆನೇಜ್‍ಮೆಂಟ್ ಮಾಜಿ ಅಧ್ಯಕ್ಷ ಝಾಕಿಕ್ ಹನೀಫ್, ಮತ್ತಿತರರು ಉಪಸ್ಥಿತರಿದ್ದರು.
ಗ್ಲೋಬಲ್ ಫ್ರೆಂಡ್ಸ್ ಸದಸ್ಯರಾದ ರಝಾಕ್ ಬಿ.ಎಚ್. ಸ್ವಾಗತಿಸಿದರು. ಝಕರಿಯಾ ಬಪ್ಪಳಿಗೆ ನಿರೂಪಿಸಿ, ವಂದಿಸಿದರು.