ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ ಅಮೋಘ ಸಾಧನೆ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ಚಿಕ್ಕಬಳ್ಳಾಪುರದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ 23 ನೇ ಅಂತರ್ ಕಾಲೇಜು ಅತ್ಲೆಟಿಕ್ ಸ್ಪರ್ಧೆಯಲ್ಲಿ 6 ನೂತನ ಕೂಟ ದಾಖಲೆಗಳ ಸಹಿತ 13 ಚಿನ್ನದ ಪದಕ, 2 ಬೆಳ್ಳಿಯ ಪದಕ ಮತ್ತು 3 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.
ಅಲ್ಲದೆ ಪುರುಷರ ಮತ್ತು ಮಹಿಳೆಯರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ಮಹಿಳೆಯರ ವಿಭಾಗದ ಚಾಂಪಿಯನ್‍ಶಿಪ್ ಟ್ರೋಫಿ, ಪುರುಷರ ವಿಭಾಗದ ಚಾಂಪಿಯನ್‍ನಲ್ಲಿ ಪ್ರಥಮ ರನ್ನರ್ ಅಪ್ ಟ್ರೋಫಿ ಹಾಗೂ ಕೂಟದ ಸಮಗ್ರ ಪ್ರಶಸ್ತಿಯನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.
ಚಿಕ್ಕಬಳ್ಳಾಪುರದ ಎಸ್‍ಜೆಸಿಐಟಿಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಮಹಿಳೆಯರ ವಿಭಾಗದ ಲಾಂಗ್‍ ಜಂಪ್, ಟ್ರಿಪಲ್‍ ಜಂಪ್ ಸ್ಪರ್ಧೆಗಳಲ್ಲಿ ಎರಡು ನೂತನ ಕೂಟ ದಾಖಲೆಗಳನ್ನು ನಿರ್ಮಿಸಿ 4×100ಮೀ ಮತ್ತು 4×400ಮೀ ಮಿಕ್ಸೆಡ್ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪಡೆದ ಪ್ರಥಮ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿ ಪವಿತ್ರ ಜಿ ಕೂಟದ ಅತ್ಯುತ್ತಮ ಮಹಿಳಾ ಕ್ರೀಡಾ ಪಟುವಾಗಿ ಹೊರಹೊಮ್ಮಿದ್ದಾರೆ.
ಕೂಟದ ವೇಗದ ಓಟಗಾರನಾಗಿ 100ಮೀ, 200ಮೀ, 4×100ಮೀ ಮತ್ತು 4×400ಮೀ ಮಿಕ್ಸೆಡ್‍ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪಡೆದ ತೃತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ಲೋಹಿತ್ ಪುರುಷರ ವಿಭಾಗದ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪುರುಷರ ವಿಭಾಗದ ಜಾವೆಲಿನ್‍ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಕೀರ್ತಿರಾಜ್ ನೂತನ ಕೂಟ ದಾಖಲೆಯನ್ನು ಸ್ಥಾಪಿಸಿದ್ದು ಹ್ಯಾಮರ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮಹಿಳೆಯರ ವಿಭಾಗದ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ಜಯಶ್ರೀ ಬಿ ನೂತನ ಕೂಟ ದಾಖಲೆ ಮಾಡಿದ್ದು, 4×100ಮೀ ರಿಲೇಯಲ್ಲಿ ಚಿನ್ನ ಹಾಗೂ ಟ್ರಿಪಲ್‍ಜಂಪ್‍ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿನಿ ರಕ್ಷಿತಾ ಐ ಮಹಿಳೆಯರ ವಿಭಾಗದ 20 ಕಿಮೀ ನಡಿಗೆ ಸ್ಪರ್ಧೆಯಲ್ಲಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದು 4×100ಮೀ ಮತ್ತು 4×400ಮೀ ಮಿಕ್ಸೆಡ್ ರಿಲೇ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನು ಗಳಿಸಿಕೊಂಡಿದ್ದಾರೆ.
ಪುರುಷರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಪ್ರತೀಕ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ, ಮಹಿಳೆಯರ ವಿಭಾಗದ ಹ್ಯಾಮರ್‍ಥ್ರೋ ಮತ್ತು ಡಿಸ್ಕಸ್ ಥ್ರೋ ವಿಭಾಗದಲ್ಲಿ ತೃತೀಯ ವರ್ಷದ ಮೆಕ್ಯಾನಿಕಲ್ ವಿಭಾಗದ ಪ್ರೇರಣಾ ಕೆಮ್ಮಿಂಜೆ 2 ಚಿನ್ನದ ಪದಕದ ಸಾಧನೆಯನ್ನು ಮಾಡಿದ್ದಾರೆ. ದ್ವಿತೀಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಭಿರಂಜನ್, ಭರತ್‍ರಾಜ್ ಹಾಗೂ ಪ್ರಥಮ ವರ್ಷದ ಎಐಎಂಎಲ್ ವಿಭಾಗದ ಜಗದೀಶ.ಕೆ ಪುರುಷರ ವಿಭಾಗದ 4×100ಮೀ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ದ್ವಿತೀಯ ವರ್ಷದ ಮೆಕ್ಯಾನಿಕಲ್ ವಿಭಾಗದ ಶರತ್ ಕೆ ಎಸ್ 4×400ಮೀ ಮಿಕ್ಸೆಡ್ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ತೃತೀಯ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಮೇಘನಾ ಪಿ ಇ 4×100ಮೀ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಮಹಿಳೆಯರ ಹೈಜಂಪ್‍ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದಾರೆ.
ದ್ವಿತೀಯ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿ ರಂಜಿತ್ ಪಿ ಯು ಪುರುಷರ ಜಾವೆಲಿನ್ ಥ್ರೋನಲ್ಲಿ ಕಂಚಿನ ಪದಕ, ಪ್ರಥಮ ವರ್ಷದ ಎಐಎಂಎಲ್ ವಿಭಾಗದ ಅನ್ವಿತ್ ಬಿ ಎನ್ 20ಕಿಮೀ ನಡಿಗೆಯಲ್ಲಿ ಕಂಚಿನ ಪದಕ ಹಾಗೂ ತೃತೀಯ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ಸನತ್ ಶೆಟ್ಟಿ ಪಿ ಪುರುಷರ 110ಮೀ ಹರ್ಡಲ್ಸ್‍ನಲ್ಲಿ ಕಂಚಿನ ಪದಕವನ್ನು ಗಳಿಸಿಕೊಂಡಿದ್ದಾರೆ.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಬಾಲಚಂದ್ರ ಗೌಡ ಭಾರ್ತಿಕುಮೇರು ಇವರ ತರಬೇತಿ ಹಾಗೂ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

Medal Winners 300x156

Pavithra 265x300 Lohith 262x300

Related Articles