ಕನಿಷ್ಠ ವೇತನ ನಿಗದಿಪಡಿಸಲು ಆಗ್ರಹಿಸಿ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಂದ (VRP) ಮನವಿ…

ಸುಳ್ಯ: ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಡಿ ಸಾಮಾಜಿಕ ಪರಿಶೋಧನಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಂಪನ್ಮೂಲ ವ್ಯಕ್ತಿಗಳು (ವಿ.ಆರ್.ಪಿ) ತಮಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಸಮಿತಿ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ, ಅವರ ತೆಕ್ಕಿಲ್ ನಿವಾಸದಲ್ಲಿ ಮನವಿ ಸಲ್ಲಿಸಿದರು.
ಕಳೆದ ಹಲವು ವರ್ಷಗಳಿಂದ ಗ್ರಾಮೀಣ ಭಾಗದ ಪ್ರಮುಖ ಯೋಜನೆಗಳ ಪಾರದರ್ಶಕತೆಗಾಗಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಸದ್ಯ ಅತ್ಯಲ್ಪ ಗೌರವಧನ (₹8,000 ದಿಂದ ₹11,500) ನೀಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ತಮ್ಮನ್ನು ‘ಅಕುಶಲ ಕಾರ್ಮಿಕರು’ ಎಂದು ಪರಿಗಣಿಸಿ ದಿನವೊಂದಕ್ಕೆ ₹743 ರಂತೆ ತಿಂಗಳಿಗೆ ₹19,319 ಕನಿಷ್ಠ ವೇತನ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಆರೋಗ್ಯ ವಿಮೆ ಮತ್ತು ಪಿಂಚಣಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಪ್ರೋಗ್ರಾಮ್ ಮ್ಯಾನೇಜರ್ ರಾಜೀವ ಸಾಲ್ಯಾನ್, ಸುಳ್ಯದ ಚಂದ್ರಶೇಖರ ಪಂಜ, ರೇಷ್ಮಾ, ಪ್ರತಿಭಾ, ಅಮೃತ ಹಾಗೂ ಬೆಳ್ತಂಗಡಿಯ ಲೀಲಾವತಿ, ಸುಮಲತ, ಅಮಿತಾ, ಸುಪ್ರೀತ, ಉಷಲತಾ, ಪ್ರಮೀಳಾ, ಲಾವಣ್ಯ ಉಪಸ್ಥಿತರಿದ್ದರು.ಮನವಿ ಸ್ವೀಕರಿಸಿ ಕನಿಷ್ಠ ವೇತನದ ಬಗ್ಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರಲ್ಲಿ ಚರ್ಚಿಸಿ ಮುಂದಿನ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸುವುದಾಗಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ನಿಯೋಗಕ್ಕೆ ಭರವಸೆ ನೀಡಿದರು.




