ಆರ್ಯಭಟ ಪುರಸ್ಕೃತ ಕೆ.ಕೆ. ಶೆಟ್ಟರಿಗೆ ಹುಟ್ಟೂರ ಅಭಿನಂದನೆ…
'ದಾನ-ಧರ್ಮವನ್ನು ಅರ್ಥವತ್ತಾಗಿಸಿದ ಕೆ.ಕೆ.ಶೆಟ್ಟಿ': ಭಾಸ್ಕರ ರೈ ಕುಕ್ಕುವಳ್ಳಿ...
ಕುಂಬಳೆ: ಮನುಷ್ಯ ಜೀವನದಲ್ಲಿ ದಾನ ಮತ್ತು ಧರ್ಮ ಕೇವಲ ಬಾಯ್ಮಾತಿನ ಪದಗಳಾಗಿ ಉಳಿಯುವುದಿಲ್ಲ. ನಾವು ಕೈಯೆತ್ತಿ ನೀಡುವ ದಾನ, ಶ್ರದ್ಧೆಯಿಂದ ಆಚರಿಸುವ ಧರ್ಮ ಇವೆರಡೂ ಸ್ವಾರ್ಥ ರಹಿತವಾಗಿರಬೇಕು. ಉದ್ಯಮಿ ಕೆ.ಕೆ.ಶೆಟ್ಟರು ತಮ್ಮ ನಡೆ ನುಡಿಗಳಿಂದ ಈ ಮಾತನ್ನು ಅರ್ಥವತ್ತಾಗಿಸಿದ್ದಾರೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಮತ್ತು ಲೇಖಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ 2024ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಅಹಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರಿಗೆ ಅವರಿಗೆ ದೇವಸ್ಥಾನ ಆಡಳಿತ ಮಂಡಳಿ ಸೇವಾ ಸಮಿತಿ ಮತ್ತು ಊರವರ ವತಿಯಿಂದ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಜರುಗಿದ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
‘ಬಡವರಿಗೆ ಆರೋಗ್ಯ ಚಿಕಿತ್ಸೆ, ಗ್ರಹ ನಿರ್ಮಾಣ, ಶೈಕ್ಷಣಿಕ ನೆರವು, ಸಾಂಸ್ಕೃತಿಕ – ಸಾಮಾಜಿಕ ಕಾರ್ಯಕ್ರಮಗಳಿಗೆ ಧನಸಹಾಯವಲ್ಲದೆ ಅಹ್ಮದ್ ನಗರ ಅಯ್ಯಪ್ಪ ದೇವಸ್ಥಾನ ಮತ್ತು ಮುಂಡಪಳ್ಳ ರಾಜರಾಜೇಶ್ವರಿ ಕ್ಷೇತ್ರಗಳನ್ನು ನಿರ್ಮಿಸುವುದರೊಂದಿಗೆ ಅಡೂರು,ಮಧೂರು, ಕಣಿಪುರ ಸೇರಿದಂತೆ ಕಾಸರಗೋಡು ಜಿಲ್ಲೆಯ 50ಕ್ಕೂ ಮಿಕ್ಕಿದ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಕ್ಕೆ ಗರಿಷ್ಠ ಮೊತ್ತದ ಕೊಡುಗೆ ನೀಡಿದ ಕೆ.ಕೆ.ಶೆಟ್ಟರು ಕುಂಬಳೆ ಸೀಮೆಯ ಹೆಮ್ಮೆಯ ಪುತ್ರ’ ಎಂದವರು ಸನ್ಮಾನಿತರನ್ನು ಅಭಿನಂದಿಸಿದರು. ಮುಂಬಯಿ ಉದ್ಯಮಿ ಕುತ್ತಿಕಾರ್ ಕೆ.ಪಿ. ರೈ ಅಧ್ಯಕ್ಷತೆ ವಹಿಸಿದ್ದರು.
ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೋಕ್ತೆಸರ ನಾರಾಯಣ ಹೆಗ್ಡೆ ಕೋಡಿಬೈಲ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಪಾರೆ ಭಗವತಿ ಆಲಿ ಚಾಮುಂಡಿ ದೈವಸ್ಥಾನದ ಅಧ್ಯಕ್ಷ ಸುಕುಮಾರ, ಶಂಕರ ರೈ ಮಾಸ್ಟರ್ ದೇಲಂಪಾಡಿ, ಸತೀಶ್ಚಂದ್ರ ಭಂಡಾರಿ ಕೋಳಾರ್, ಮುಂಬಯಿ ತೀಯಾ ಸಮಾಜದ ಅಧ್ಯಕ್ಷ ಬಾಬು ಬೆಳ್ಚಡ, ಹರಿದಾಸ ಜಯಾನಂದ ಹೊಸದುರ್ಗ ಶುಭ ಹಾರೈಸಿ ಕೆ.ಕೆ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಿದರು. ಗೋಪಾಲಕೃಷ್ಣ ಶೆಟ್ಟಿ ಕುತ್ತಿಕಾರ್, ಜಯಪ್ರಸಾದ್ ರೈ ಕಾರಿಂಜ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶ್ರೀ ಕ್ಷೇತ್ರದ ಮತ್ತು ವಿವಿಧ ಮಠ ಮಂದಿರ, ಸಂಘ ಸಂಸ್ಥೆಗಳ ವತಿಯಿಂದ ಕೆ.ಕೆ. ಶೆಟ್ಟರನ್ನು ಸನ್ಮಾನಿಸಲಾಯಿತು.
ಸ್ವಾಗತ ಭಾಷಣ ಮಾಡಿದ ಕ್ಷೇತ್ರಾಡಳಿತ ಮಂಡಳಿ ಕಾರ್ಯದರ್ಶಿ ಮಡ್ವ ಮಂಜುನಾಥ ಆಳ್ವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಕೆ.ಕೆ.ಶೆಟ್ಟಿಯವರ ತಂದೆ ಕುತ್ತಿಕಾರ್ ಸುಬ್ಬಣ್ಣ ಶೆಟ್ಟರ ಶಿಸ್ತುಬದ್ದ ಜೀವನಶೈಲಿಯು ಪುತ್ರನ ಉನ್ನತಿಗೆ ಪ್ರಮುಖ ಕಾರಣ ಎಂದು ಹೇಳಿದರು. ರೋಹಿಣಿ ಶಿವಶಂಕರ ದಿವಾಣ ಪ್ರಾರ್ಥಿಸಿದರು. ವಿನೋದ ಪ್ರಸಾದ್ ರೈ ಕಾರಿಂಜ ವಂದಿಸಿದರು. ಅಧ್ಯಾಪಕ ಗುರುಮೂರ್ತಿ ನಾಯ್ಕಾಪು ನಿರೂಪಿಸಿದರು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.