ಹರಿಹರಪುರದಲ್ಲಿ ‘ಜಾಬಾಲಿ – ನಂದಿನಿ’ ಯಕ್ಷಗಾನ ತಾಳ ಮದ್ದಳೆ…

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರದಲ್ಲಿರುವ ಕಾಳನಾಯ್ಕನ ಕಟ್ಟೆ ಶ್ರೀ ರಕ್ತೇಶ್ವರಿ, ವರ್ತೆ ಪಂಜುರ್ಲಿ, ಮರ್ಲು ಚಿಕ್ಕು ದೇವಸ್ಥಾನದ 23ನೇ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು‌.
ಈ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ವಿಶೇಷ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿತ್ತು. ಯಕ್ಷ ವೇದಿಕೆ ಹರಿಹರಪುರ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು.

ಜಾಬಾಲಿ – ನಂದಿನಿ:
ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಿಂದ ಆಯ್ದ ‘ಜಾಬಾಲಿ – ನಂದಿನಿ’ ಆಖ್ಯಾನವನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಕಲಾವಿದರು ಪ್ರಸ್ತುತಪಡಿಸಿದರು. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಂದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಜಾಬಾಲಿ) ಮತ್ತು ವಿಜಯ ಶಂಕರ ಆಳ್ವ ಮಿತ್ತಳಿಕೆ (ನಂದಿನಿ) ಅರ್ಥಧಾರಿಗಳಾಗಿ ಭಾಗವಹಿಸಿದರು. ಉಳಿದ ಪಾತ್ರಗಳಲ್ಲಿ ಸ್ಥಳೀಯ ಕಲಾವಿದರಾದ ಅರವಿಂದ ಸೋಮಯಾಜಿ (ದೇವೇಂದ್ರ), ಕೆ.ಎಸ್. ಮಂಜುನಾಥ ಹರಿಹರಪುರ (ಶ್ರೀದೇವಿ) ಮತ್ತು ಶ್ರವಣಕುಮಾರ್ (ಪುರಜನರು) ಪಾಲ್ಗೊಂಡರು.
ಹಿಮ್ಮೇಳದಲ್ಲಿ ಕಿಗ್ಗ ಹಿರಣ್ಣಾಚಾರ್ ಮತ್ತು ವೆಂಕಟರಮಣ ಮೂರ್ತಿ ಕೊಪ್ಪ ಭಾಗವತರಾಗಿದ್ದರು. ವೆಂಕಟೇಶ ಕೊಗ್ರೆ ಮದ್ದಳೆ ನುಡಿಸಿದರು.
ಕಾರ್ಯಕ್ರಮ ಸಂಘಟಕರಾದ ಕೆ. ಎಸ್. ಮಂಜುನಾಥ ಶೇರಿಗಾರ್ ಹರಿಹರಪುರ ಸ್ವಾಗತಿಸಿ, ಕಲಾವಿದರನ್ನು ಗೌರವಿಸಿದರು. ಕ್ಷಮಿತ್ ರಾಜ್, ಪ್ರಶಾಂತ್ ಕುಮಾರ್ ಮತ್ತು ವಿಘ್ನೇಶ್ ಸಹಕರಿಸಿದರು. ಕಾಳನಾಯ್ಕನ ಕಟ್ಟೆ ರಕ್ತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಯಕ್ಷವೇದಿಕೆ ಹರಿಹರಪುರ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

whatsapp image 2026 02 27 at 8.44.47 pm

Related Articles

Back to top button