ವಿಕಲಚೇತನರಿಗೆ ತ್ವರಿತಗತಿಯಲ್ಲಿ ಸೌಲಭ್ಯ ಮಂಜೂರು – ಟಿ.ಎಂ ಶಾಹೀದ್ ತೆಕ್ಕಿಲ್…

ಮಂಗಳೂರು:ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ಅರ್ಹವಾಗಿ ದೊರಕಬೇಕಾದ ಸೌಲಭ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ತಿಳಿಸಿದರು.
ಅವರು ಫೆ.27 ರಂದು ಪದವಿನಂಗಡಿ ದೇವಿನಗರದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಕಾರ್ಖಾನೆಗಳು, ಬಾಯ್ಲರ್‍ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸಾರಿಗೆ ಇಲಾಖೆ ಇವರ ಸಹಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಚೇತನರಿಗೆ ವಿವಿಧ ಉದ್ಯೋಗದಾತರ ಪ್ರಾಯೋಜಿತ ಯಾಂತ್ರಿಕ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರು ಸಮಾಜದಲ್ಲಿ ಯಾವುದೇ ಕೊರತೆಯಾಗದಂತೆ ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ವಿಕಲಚೇತನರ ಸೌಲಭ್ಯಗಳನ್ನು ವಿಳಂಬವಿಲ್ಲದೆ ನೀಡಬೇಕು. ಇತರರಂತೆ ಅವರು ದುಡಿಯಲು ಹಾಗೂ ಸೇವೆಗೈಯಲು ಈ ಸೌಲಭ್ಯಗಳು ಪೂರಕವಾಗಬೇಕು ಎಂದು ಅವರು ಹೇಳಿದರು. ಕಾರ್ಮಿಕರ ಜೀವನ ಉನ್ನತವಾಗಿರಲು ಅವರಿಗೆ ಕನಿಷ್ಠ ವೇತನ ಒದಗಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದರು. ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕರ ಮತ್ತು ವಿಶೇಷ ಚೇತನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸರಕಾರ ಕಾರ್ಮಿಕರ ಹಾಗು ವಿಶೇಷ ಚೇತನರ ಪರವಾಗಿದೆ ಎಂದರು.
ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಂಕಣಿ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನ್ಲಿ ಅಲ್ವಾರಿಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸದಾಶಿವ ಉಳ್ಳಾಲ, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಕಾರ್ಖಾನೆಗಳ ಉಪನಿರ್ದೇಶಕ ರಾಜೇಶ್ ಮಿಶ್ರಿಕೋಟಿ, ಎಂ.ಆರ್.ಪಿ.ಎಲ್ ಆಡಳಿತ ಸಿಜಿಎಂ ಪ್ರಶಾಂತ್ ಬಾಳಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿದರು, ವಿಲ್ಮಾ ಎಲಿಜಬೆತ್ ವಂದಿಸಿದರು.
ಸಮಾರಂಭದಲ್ಲಿ ಸುಮಾರು 90 ತ್ರಿಚಕ್ರ ಸ್ಕೂಟರ್ ವಿತರಿಸಲಾಯಿತು. ಎಂ.ಆರ್.ಪಿ.ಎಲ್-50, ಎಂ.ಸಿ.ಎಫ್-27, ಬಿ.ಎಸ್.ಎಫ್-5, ಯೆನೆಪೆÇೀಯ ವಿಶ್ವವಿದ್ಯಾಲಯ-3, ಅರವಿಂದ್, ಮಾಂಡೋವಿ, ಕ್ಯಾಂಪ್ಕೋ , ಇನ್ವೆಂಜರ್ ಟೆಕ್ನಾಲಜಿ ಸಂಸ್ಥೆಗಳು ತಲಾ ಒಂದು ತ್ರಿಚಕ್ರ ವಾಹನಗಳನ್ನು ಪ್ರಾಯೋಜಿಸಿದ್ದವು.

whatsapp image 2026 02 27 at 9.02.13 pm

whatsapp image 2026 02 27 at 9.02.10 pm

whatsapp image 2026 02 27 at 9.02.04 pm

Related Articles

Back to top button