ಬಂಟ್ವಾಳ ಬಿಜೆಪಿ ವತಿಯಿಂದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆ…
ಬಂಟ್ವಾಳ: ಪ್ರಥಮ ಅವಧಿಯ ಸೋಲನ್ನೇ ಸವಾಲಾಗಿ ಅತ್ಯಂತ ಹೆಚ್ಚಿನ ಬಹುಮತದಿಂದ ಗೆದ್ದ ಬಂದ ಶಾಸಕ ರಾಜೇಶ್ ನಾಯ್ಕ್ ಅವರು ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದ್ದು, ಅಭಿವೃದ್ಧಿಯಾಗಿಲ್ಲ ಎಂದು ಹೇಳುವ ಕಾಂಗ್ರೆಸ್ ನವರ ಕಣ್ಣು ಪರೀಕ್ಷೆ ಮಾಡಬೇಕು ಎಂದು ಪುತ್ತೂರಿನ ಹಿರಿಯರಾದ ಡಾ.ಪ್ರಸಾದ್ ಭಂಡಾರಿ ಎಂ.ಕೆ.ಹೇಳಿದರು.
ಅವರು ಬಂಟ್ವಾಳ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ನಡೆದ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 4ನೇ ದಿನದ ಪಾದಯಾತ್ರೆಯ ಸಮಾರೋಪವಾಗಿ ಪೆರಾಜೆ ಗ್ರಾಮದ ಸಾದಿಕುಕ್ಕು ಗುಡ್ಡೆ ಚಾಮುಂಡಿ ಕ್ಷೇತ್ರದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದರು.
ದೇವರಿಗೆ ಸಮಾನಾಗಿರುವ ರಾಜೇಶ್ ನಾಯ್ಕ್ ಅವರು ಗೆಲ್ಲಬೇಕು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ನಿತ್ಯವೂ ಪ್ರಾರ್ಥಿಸುತ್ತಿದ್ದೇನೆ. ಬಂಟ್ವಾಳದಲ್ಲಿ ಕೋಮು ಗಲಭೆಯನ್ನು ಮುಕ್ತ ಗೊಳಿಸಿರುವುದೇ ರಾಜೇಶ್ ನಾಯ್ಕ್ ಅವರ ದೊಡ್ಡ ಸಾಧನೆಯೇ ಸರಿ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡಿಕೊಂಡು ಬಂದಿದ್ದು, ನೀಡಿದ ಅವಕಾಶಗಳನ್ನು ಬಳಸಿಕೊಂಡು ಪಕ್ಷದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸೋತಿರುವ ಸಂದರ್ಭದಲ್ಲೂ ೬೫ ಸಾವಿರ ಮಂದಿ ಮತ ನೀಡಿದ್ದು, ಮುಂದಿನ ಅವಧಿಯಲ್ಲಿ ಬಂಟ್ವಾಳದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಪ್ರಯತ್ನ ಮಾಡಿ ಪಕ್ಷವನ್ನು ಗೆಲುವಿನ ದಡ ತಲುಪಿಸಿದ ತೃಪ್ತಿ ತನಗಿದೆ. ಅನಿರೀಕ್ಷಿತವಾಗಿ ಶಾಸಕನಾಗುವ ಅವಕಾಶ ಒದಗಿಬಂದಿದ್ದು, ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ. ಬಂಟ್ವಾಳದ ಜನತೆ ನೀಡಿದ ಪ್ರೀತಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮಾತನಾಡಿ, ಬಂಟ್ವಾಳ ಕ್ಷೇತ್ರಕ್ಕೆ ಬಂದಿರುವ ಅನುದಾನ ಸುಲಭವಾಗಿ ಬಂದಿಲ್ಲ, ಬದಲಾಗಿ ಶಾಸಕರು ಅನುದಾನಕ್ಕಾಗಿ ಸಚಿವರು, ಅಧಿಕಾರಿಗಳ ಬೆನ್ನು ಹಿಡಿದು ಕ್ಷೇತ್ರಕ್ಕೆ ತಂದಿದ್ದಾರೆ. ರಾಜಧರ್ಮ ಪಾಲನೆಯ ಮೂಲಕ ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ್ದಾರೆ ಎಂದರು.
ನಗರ ನೀರು ಸರಬರಾಜು- ಒಳಚರಂಡಿ ನಿಗಮದ ನಿರ್ದೇಶಕಿ ಸುಲೋಚನ ಜಿ.ಕೆ.ಭಟ್, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ವಿಟ್ಲಪಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ, ಸಹಸಂಚಾಲಕ ಮಾಧವ ಮಾವೆ, ನೆಟ್ಲಮುಡ್ನೂರು ಗ್ರಾ.ಪಂ.ಅಧ್ಯಕ್ಷ ಸತೀಶ್ ಪೂಜಾರಿ, ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.
ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಪ್ರಸ್ತಾವನೆಗೈದು, ಪಾದಯಾತ್ರೆ ಸಾಗಿದ ಗ್ರಾಮಗಳಿಗೆ ಶಾಸಕರು ನೀಡಿದ ಅನುದಾನಗಳ ವಿವರ ನೀಡಿದರು.
ಉಮೇಶ್ ಎಸ್.ವಿ. ಸ್ವಾಗತಿಸಿದರು. ಪೆರಾಜೆ ಗ್ರಾ.ಪಂ.ಸದಸ್ಯ ರಾಜಾರಾಮ್ ಭಟ್ ವಂದಿಸಿದರು. ಯತಿರಾಜ್ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.