ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು -ವಿಶ್ವ ಮಹಿಳಾ ದಿನಾಚರಣೆ…
ಪುತ್ತೂರು: ಪ್ರತಿಯೊಬ್ಬರಲ್ಲಿಯೂ ಒಂದೊಂದು ವಿಶೇಷ ಶಕ್ತಿಗಳು, ಪ್ರತಿಭೆಗಳು ಅಡಕವಾಗಿದ್ದು ಯಾವುದೋ ಕಾಲಘಟ್ಟದಲ್ಲಿ ಅದು ಅನಾವರಣಗೊಳ್ಳುತ್ತದೆ ಎಂದು ಕ್ರೋಶೆ ಆನ್ಸ್ ವೀಲ್ಸ್‍ನ ಕ್ರೋಶೆ ಕಲಾವಿದೆ ಪೂರ್ಣಿಮಾ.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ಐಇಇಇ ವಿಸಿಇಟಿ ವಿದ್ಯಾರ್ಥಿ ವಿಭಾಗ ಮತ್ತು ಕಾಲೇಜು ಆಂತರಿಕ ದೂರು ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಮಾ.16 ರಂದು ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಅಪಘಾತಕ್ಕೆ ತುತ್ತಾಗಿ ಬದುಕೇ ಬೇಡ ಎನ್ನುವ ಸ್ಥಿತಿಯಿಂದ ಹೊರ ಬಂದ ವಿಷಯಗಳನ್ನು ಹಂಚಿಕೊಂಡ ಅವರು ಜೀವನದಲ್ಲಿ ಮಾನಸಿಕ ಮತ್ತು ದೈಹಿಕ ದೃಢತೆ ಅತೀ ಅಗತ್ಯ. ಗಾಲಿಕುರ್ಚಿಯಲ್ಲಿ ಜೀವನ ಸಾಗಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮೈತ್ರೇಯಿ ಗುರುಕುಲದಲ್ಲಿ ಕಲಿಯುವ ಸಂದರ್ಭದಲ್ಲಿ ಕಲಿತ ಕ್ರೋಶೆ ಕಲೆಯು ನನ್ನ ಬಾಳಿಗೆ ಒಂದು ದಿಕ್ಕನ್ನು ತೋರಿಸಿತು ಎಂದರು. ವಿದ್ಯಾರ್ಥಿಗಳಿಗೆ ಹವ್ಯಾಸಗಳು, ಪಠ್ಯೇತರ ಚಟುವಟಿಕೆಗಳು ಅತೀ ಅವಶ್ಯಕ. ಪೋಷಕರು ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಿ ಅವರನ್ನು ಹುರಿದುಂಬಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಮಾತನಾಡಿ ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ ವಿವಿಧ ಜವಾಬ್ಧಾರಿಯನ್ನು ನಿಭಾಯಿಸುವ ಮಹಿಳೆಯು ತನ್ನ ಕುಟುಂಬದ ಏಳಿಗೆಯಲ್ಲಿ ಮತ್ತು ಸಮಾಜದ ಉನ್ನತಿಯಲ್ಲಿ ಅತಿದೊಡ್ಡ ಕೊಡುಗೆಯನ್ನು ನೀಡುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಶಿಕ್ಷಕಿಯಾಗಿ, ವೈದ್ಯೆಯಾಗಿ, ಇಂಜಿನಿಯರ್ ಆಗಿ ಹೀಗೆ ಪ್ರತಿಯೊಂದು ವಿಭಾಗಗಳಲ್ಲಿಯೂ ಅವಳು ಸಾಧನೆಯ ಶಿಖರವನ್ನು ಏರುತ್ತಿದ್ದಾಳೆ ಎಂದರಲ್ಲದೆ ಮಹಿಳೆಯರಿಗೆ ಸಿಕ್ಕಿದ ಸ್ವಾತಂತ್ರ್ಯ ಅದು ಸ್ವೇಚ್ಚಾಚಾರವಲ್ಲ, ಬದಲಿಗೆ ಸಮಾಜದಲ್ಲಿ ಅವಳಿಗೆ ಸೂಕ್ತ ಸ್ಥಾನಮಾನವನ್ನು ಗಳಿಸುವುದಕ್ಕೆ ನೀಡಿದ ಅವಕಾಶ.ಇದನ್ನು ತಿಳಿದು ನಡೆಯಬೇಕಾದ ಜವಾಬ್ಧಾರಿಯೂ ಮಹಿಳೆಯ ಮೇಲಿದೆ ಎಂದರು.
ಐಇಇಇ ವಿಮೆನ್ ಇನ್ ಇಂಜಿನಿಯರಿಂಗ್ ಅಧ್ಯಾಪಕ ಸಲಹೆಗಾರ್ತಿ ಪ್ರೊ .ರಜನಿ ರೈ, ಕಾಲೇಜು ಆಂತರಿಕ ದೂರು ಸಮಿತಿಯ ಸಂಚಾಲಕಿ ಪ್ರೊ.ರೂಪಾ.ಜಿ.ಕೆ ಮತ್ತು ಐಇಇಇ ವಿಮೆನ್ ಇನ್ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರತಿನಿಧಿ ಚೈತನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಐಇಇಇ ಶಾಖಾ ಸಲಹೆಗಾರ್ತಿ ಡಾ.ಜೀವಿತ ಬಿ.ಕೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರಾದ ಪ್ರೀತಾ.ಎಸ್.ಎಮ್ ಸ್ವಾಗತಿಸಿ, ಚೈತನ್ಯ ವಂದಿಸಿದರು. ತನ್ಮಯಿ ರೈ ಕಾರ್ಯಕ್ರಮ ನಿರ್ವಹಿಸಿದರು.





