ಕರ್ನಾಟಕ – ಕೇರಳ ಗಡಿ ತೆರವುಗೊಳಿಸಿ ಸುಪ್ರೀಂಕೋರ್ಟ್ ಆದೇಶ- ತುರ್ತು ಚಿಕಿತ್ಸೆಗಾಗಿ ಮಾತ್ರ ಅವಕಾಶ…
ಮಂಗಳೂರು: ಕರ್ನಾಟಕ-ಕೇರಳ ನಡುವಿನ ಗಡಿ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕಾಸರಗೋಡಿನ ಕೊರೊನೇತರ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಹೊತ್ತ ಆ್ಯಂಬುಲೆನ್ಸ್ ಗಳನ್ನು ತಲಪಾಡಿ ಮೂಲಕ ಸಂಚರಿಸಲು ಸುಪ್ರೀಂಕೋರ್ಟ್ ಅವಕಾಶ ಕಲ್ಪಿಸಿದೆ.
ಕಾಸರಗೋಡು ಸಹಿತ ಕೇರಳದಲ್ಲಿ ಅತ್ಯಧಿಕ ಕೊರೊನಾ ಪ್ರಕರಣಗಳು ವರದಿಯಾದ ಬಳಿಕ ಕೇರಳ ಪ್ರವೇಶಿಸುವ ಎಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶಿಸಿತ್ತು. ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದು ಹಾಕುವಂತೆ ಕೇರಳ ಹೈಕೋರ್ಟ್ ಅಸೋಸಿಯೇಷನ್ ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೇರಳ ಹೈಕೋರ್ಟ್, ಗಡಿ ತೆರೆಯುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು.
ಈ ಹಿನ್ನಲೆ ಕೇರಳ ಹೈಕೋರ್ಟ್ ನ ಆದೇಶವನ್ನು ಕರ್ನಾಟಕ ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಇದೀಗ ನ್ಯಾಯಪೀಠವು ಎಲ್ಲಾ ವಾದ ವಿವಾದಗಳನ್ನು ನೋಡಿ ತುರ್ತು ಚಿಕಿತ್ಸೆಗಾಗಿ ಕರ್ನಾಟಕ-ಕೇರಳ ಗಡಿ ತೆರವುಗೊಳಿಸುವಂತೆ ಆದೇಶ ನೀಡಿದೆ.