ಗೋಮಾಯಿ: ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ, ಧಾರ್ಮಿಕ ಸಭೆ…
ಧಾರ್ಮಿಕ ಉತ್ಸವ ಆಚರಣೆಗಳ ಮೂಲಕ ಸಶಕ್ತ ಸಮಾಜದ ನಿರ್ಮಾಣವಾಗಲಿ: ವಜ್ರದೇಹಿ ಶ್ರೀ...
ಬಂಟ್ವಾಳ: ಹಿಂದೂ ಸಮಾಜ ಸದೃಢವಾದರೆ ಮಾತ್ರ ದೇಶ ಬಲಿಷ್ಠ ವಾಗುತ್ತದೆ. ಪ್ರಸ್ತುತ ಕಾಲಘಟ್ಟದಲ್ಲಿ ಜಾತಿ, ಮತ, ಮೇಲು ಕೀಳು, ಬಡವ ಬಲ್ಲಿದ ಎಂಬ ತಾರತಮ್ಯದಲ್ಲಿ ಹಿಂದೂ ಸಮಾಜ ದಾರಿ ತಪ್ಪುತ್ತಿದೆ. ಬೇರೆ ಬೇರೆ ಜಾತಿ ಸಂಘಟನೆಗಳಲ್ಲಿ ಸಕ್ರಿಯವಾಗುವ ನಾವು ಹಿಂದೂ ಸಮಾಜದಲ್ಲಿ ಒಟ್ಟಾಗುವುದು ಯಾವಾಗ ?.ಎಲ್ಲರೂ ಐಕ್ಯಮತದಿಂದ ಸಂಘಟಿತರಾಗಿ ಹಿಂದೂ ಸಮಾಜ ಜಾಗೃತಿಯಾಗಬೇಕು, ಅದಕ್ಕಾಗಿ ಇಂತಹ ಧಾರ್ಮಿಕ ಉತ್ಸವ ಆಚರಣೆಗಳು ಸಶಕ್ತ ಸಮಾಜದ ನಿರ್ಮಾಣಕ್ಕೆ ಪೂರಕವಾಗಲಿ, ಈ ಕ್ಷೇತ್ರದ ಸಾನಿಧ್ಯ ವೃದ್ಧಿಯಾಗಿ ಊರಿಗೆ ಅಶ್ರಯತಾಣವಾಗಲಿ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಹೇಳಿದರು.
ಅವರು ತುಂಬೆ ಗ್ರಾಮದ ರಾಮಲ್ ಕಟ್ಟೆ ಗೋಮಾಯಿ ಶ್ರೀ ನಾಗಬ್ರಹ್ಮ ಶ್ರೀ ನಾಗಕನ್ನಿಕೆ ದೇವಸ್ಥಾನದ 39ನೇ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಮಾ.1 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಾಚನವಿತ್ತರು.
ಸಭೆಯ ಅಧ್ಯಕ್ಷತೆ ವಹಿಸಿದ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ ಮಾತನಾಡಿ, ವಿವಿಧತೆಯಲ್ಲಿ ಏಕತೆ ಕಾಣುವ ನಾವು ಬೇಧ ಭಾವ ಬಿಟ್ಟು ಹಿಂದೂ ಎನ್ನುವ ಮನೋಭಾವನೆಯಿಂದ ಸಾಮೂಹಿಕ ಚಿಂತನೆ ಹಾಗೂ ಸಾಮಾಜಿಕ ಸಂಕಲ್ಪ ಮಾಡೋಣ, ಸಮಾಜದ ಕಟ್ಟಕಡೆಯ ವ್ಯಕಿಯ ಕಷ್ಟಗಳಿಗೂ ಸ್ಪಂದಿಸುವ ಗುಣ ನಮ್ಮದಾಗಲಿ, ನಮ್ಮ ಗಳಿಕೆಯ ಒಂದಂಶವನ್ನು ಸಮಾಜಕ್ಕೆ ಅರ್ಪಿಸೋಣ ಎಂದರು.
ವಿ ಹಿಂ ಪ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ಮಾತನಾಡಿ, ಈ ಭೂಮಿ ದೇವ ಭೂಮಿ, ಮಾತೃ ಭೂಮಿ ಇಲ್ಲಿ ಹುಟ್ಟಿದ ನಾವು ಧನ್ಯರು, ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಸಂಸ್ಕೃತಿ ನಮ್ಮದು,ನಾವೆಲ್ಲರೂ ಸಂಘಟಿತರಾಗಿ ಧಾರ್ಮಿಕ ಆಚರಣೆಗಳ ಮೂಲಕ ನಮ್ಮ ದೇಶ ಭಾಷೆ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಎಂದರು.
ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ ಮಾತನಾಡಿ, ನಾಗ ದೇವರು ಜ್ಞಾನ, ಸಂಪತ್ತು, ನಾಯಕತ್ವದ ಪ್ರತೀಕ,ಆರಾಧನೆಯ ಮೂಲಕ ನಮ್ಮ ಕಲೆಯನ್ನು ಉಳಿಸಿ ಮನಸ್ಸನ್ನು ವಿಕಾಸನ ಮಾಡುವ, ಧಾರ್ಮಿಕದೊಂದಿಗೆ ಕೌಟುಂಬಿಕ ವ್ಯವಸ್ಥೆಯ ಮೌಲ್ಯವನ್ನು ಬಲಪಡಿಸೋಣ ಎಂದರು.
ವೇದಿಕೆಯಲ್ಲಿ ಹಿರಿಯ ಕೃಷಿಕರಾದ ಮೋನಪ್ಪ ಮಜಿ, ತುಂಬೆ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ಕರಾವಳಿ ಕುಲಾಲ ಯುವ ವೇದಿಕೆಯ ಅಧ್ಯಕ್ಷ ಸುಮಿತ್ ಸಾಲ್ಯಾನ್, ಕಲಾ ಪೋಷಕ ಸದಾಶಿವ ಡಿ ತುಂಬೆ, ಪ್ರಗತಿಪರ ಕೃಷಿಕ ವಸಂತ್ ಗಾಣದ ಕೊಟ್ಟಿಗೆ, ಉದ್ಯಮಿ ಅಶೋಕ್ ಕುಲಾಲ್ ರಾಮಲ್ ಕಟ್ಟೆ, ಎಲೆಕ್ಟ್ರಿಕಲ್ ಗುತ್ತಿಗೆದಾರ ಕಿಶೋರ್ ಕುಮಾರ್, ಮಾಜಿ ಗ್ರಾ ಪಂ ಸದಸ್ಯ ಸಂಜೀವ ಪೂಜಾರಿ ರಾಮಲ್ ಕಟ್ಟೆ, ಸೋಮಪ್ಪ ಪೂಜಾರಿ ಅಬ್ಬೆಟ್ಟು,ಪ್ರದೀಪ್ ಬೊಳ್ಳರಿ,ಇಂದಿರಾ ಪ್ರದೀಪ್ ಬೊಳ್ಳಾರಿ,ಪ್ರಿಯದರ್ಶಿನಿ ಸುನೀಲ್ ದಾರಿಬಾಗಿಲು, ಕಾಶೀನಾಥ್ ಗಾಣದಲಚ್ಚಿಲ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಚಂದ್ರಹಾಸ ತುಂಬೆ, ಬೇಬಿ ತುಂಬೆ,ಸಿದ್ದಪ್ಪ ಎಸ್ ಅಂಗಡಿ ಪ್ರಿಯದರ್ಶಿನಿ ಸುನೀಲ್ದಾ ರಿಬಾಗಿಲು ಇವರನ್ನು ಸನ್ಮಾನಿಸಲಾಯಿತು.
ಭಜರಂಗದಳದ ಪ್ರಮುಖರಾದ ವಿಜೇತ್ ಸ್ವಾಗತಿಸಿ, ಧನ್ಯಶ್ರೀ ತುಂಬೆ ಧನ್ಯವಾದವಿತ್ತು ಕಲಾವಿದ ಹೆಚ್ ಕೆ ನೈನಾಡು ಕಾರ್ಯಕ್ರಮ ನಿರೂಪಿಸಿದರು.ಯೋಗೀಶ್ ಬೊಳ್ಳಾರಿ ಸಹಕರಿಸಿದರು
ಪ್ರತಿಷ್ಠಾ ವರ್ಧಂತ್ಯುತ್ಸವದ ಪ್ರಯುಕ್ತ ಸಾರ್ವಜನಿಕ ಸತ್ಯನಾರಾಯಣ ಪೂಜೆ, ಭಜನಾ ಸಂಕೀರ್ತನೆ,ಸ್ಥಳೀಯ ಪ್ರತಿಭೆಗಳ ನೃತ್ಯ ವೈವಿದ್ಯ, ಹಾಗೂ “ಜೋಡು ಜೀಟಿಗೆ”ಎಂಬ ನಾಟಕ ಪ್ರದರ್ಶನಗೊಂಡಿತು.



