ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು- ರಾಷ್ಟ್ರೀಯ ವಿಜ್ಞಾನ ದಿನಾಚರಣೆ…

ಪುತ್ತೂರು: ವಿಜ್ಞಾನದ ಬೆಳವಣಿಗೆ ತನ್ಮೂಲಕ ದೇಶದ ಪ್ರಗತಿಯು ಮಹಿಳೆ ಮತ್ತು ಪುರುಷರ ಸಮಾನ ಕೊಡುಗೆಯ ಪ್ರತೀಕವಾಗಿದೆ. ಹೀಗಾಗಿ ಸ್ತ್ರೀ-ಪುರುಷರೆನ್ನುವ ಸಾಮಾಜಿಕ ಅಂತರವನ್ನು ತೊಡೆದು ಹಾಕುವುದಲ್ಲದೆ, ಲಿಂಗ ಆಧಾರಿತ ವೇತನ ಅಸಮಾನತೆಯನ್ನು ಅಂತ್ಯಗೊಳಿಸಬೇಕು ಎಂದು ಕಾಸರಗೋಡಿನ ಕೃಷಿ ಅಭಿವೃದ್ಧಿ ಮತ್ತು ರೈತ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಕ್ಷ್ಮಿ ಮುರಳೀಕೃಷ್ಣ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನದ ಸಂದರ್ಭದಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗದ ಆಶ್ರಯದಲ್ಲಿ ವಿಜ್ಞಾನದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ-ವಿಕಸಿತ ಭಾರತಕ್ಕೆ ವೇಗವರ್ಧಕ ಎನ್ನುವ ವಿಷಯಾಧಾರಿತ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಡಿಜಿಟಲ್ ಸಾಕ್ಷರತೆ, ಕೃಷಿ ಅಭಿವೃದ್ಧಿಯಲ್ಲಿ ಸಮಾನ ಅವಕಾಶಗಳು ಇವೆಲ್ಲವನ್ನೂ ಒಳಗೊಂಡ ಸಾಮಾಜಿಕ ಅಭಿವೃದ್ಧಿಯು ದೇಶದ ಉನ್ನತಿಗೆ ಅತೀ ಮುಖ್ಯವಾದದ್ದು. ಅಭಿವೃದ್ಧಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಅಪಾರ ಕೊಡುಗೆಯನ್ನು ನೀಡುವುದರ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಎಂದರು. ರಚನಾತ್ಮಕ ಸಾಮಾಜಿಕ ಪರಿವರ್ತನೆಯನ್ನು ತರುವಲ್ಲಿ ವಿದ್ಯಾರ್ಥಿಗಳು ತಮ್ಮ ಕೊಡುಗೆಯನ್ನು ನೀಡಬೇಕು ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಲಿಂಗ ಅಸಮಾನತೆಯನ್ನು ತೊಡೆದುಹಾಕುವತ್ತ ಗಮನಹರಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ಸತ್ಯನಾರಾಯಣ ಭಟ್ ಮಾತನಾಡಿ ವಿಜ್ಞಾನವು ಭಾರತೀಯ ನಾಗರಿಕತೆಯಲ್ಲಿ ಆಳವಾದ ಬೇರನ್ನು ಪಸರಿಸಿದೆ. ಭಾರತದ ಶ್ರೀಮಂತ ವೈಜ್ಞಾನಿಕ ಪರಂಪರೆಯು ನಮ್ಮ ಪೂರ್ವಜರ ಕೊಡುಗೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು. ರಾಮಾಯಣ ಮಹಾಭಾರತದಂತಹ ಪ್ರಾಚೀನ ಮಹಾನ್ ಗ್ರಂಥಗಳಲ್ಲಿಯೂ ಇದು ಪ್ರತಿಫಲಿಸುತ್ತಿದ್ದು, ಸಾಂಪ್ರದಾಯಿಕ ಜ್ಞಾನ ಮತ್ತು ವೈಜ್ಞಾನಿಕ ಚಿಂತನೆಗಳ ಆಳವನ್ನು ನಮಗೆ ತಿಳಿಸುತ್ತದೆ ಎಂದರು.
ಕಾರ್ಯಕ್ರಮ ಸಂಯೋಜಕಿ, ಮೂಲ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶ್ವೇತಾಂಬಿಕಾ.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ನಿಹಾರಿಕಾ ಪ್ರಸ್ತಾವನೆಗೈದರು. ಸುಪ್ರೀತಾ ಸ್ವಾಗತಿಸಿ, ಅಶ್ವಿತಾ ವಂದಿಸಿದರು. ಏಂಜೆಲ್ ಫೋರ್ಡ್ ಮತ್ತು ಪ್ರಾಪ್ತಿ ಕಾರ್ಯಕ್ರಮ ನಿರ್ವಹಿಸಿದರು.

national science day 2026 (1)

Related Articles

Back to top button