ಆಟೋ ಪ್ರಯಾಣ ದರ ಪರಿಷ್ಕರಣೆ, ಕನಿಷ್ಠ ದರ ರೂ.30- ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್…..
ಮಂಗಳೂರು: ಏಪ್ರಿಲ್ 1ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ಪ್ರಯಾಣ ಈಗಿನ ಕನಿಷ್ಠ ದರವನ್ನು ರೂ.25 ರಿಂದ ರೂ.30 ಕ್ಕೆ ಹೆಚ್ಚಿಸಲು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ತೀರ್ಮಾನಿಸಿ, ಸಭೆಗೆ ತಿಳಿಸಿದರು.
ಫೆ.27 ರಂದು ಆಟೋ ಪ್ರಯಾಣ ದರ ಪರಿಷ್ಕರಣೆ ಕುರಿತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ತೀರ್ಮಾನವನ್ನು ತಿಳಿಸಿದರು.
ಜಿಲ್ಲೆಯಲ್ಲಿ 2016 ರಲ್ಲಿ ಆಟೋ ಪ್ರಯಾಣ ಪರಿಷ್ಕರಿಸಿದ ನಂತರ ದರ ಪರಿಷ್ಕರಣೆ ಆಗಿಲ್ಲ, ವಾಹನದ ವಿಮೆ, ಬಿಡಿ ಭಾಗ ಹೆಚ್ಚಳವಾಗಿದ್ದು, ಆಟೋ ಪ್ರಯಾಣದ ದರವನ್ನು ಹೆಚ್ಚಿಸುವಂತೆ ಆಟೋ ಚಾಲಕ ಸಂಘಟನೆಗಳ ಮುಖಂಡರು ಮತ್ತು ಚಾಲಕರು ಮಾಡಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕನಿಷ್ಟ ಪ್ರಯಾಣ ದರವನ್ನು ರೂ.30 ಕ್ಕೆ ಹೆಚ್ಚಳ ಮಾಡಲು ಒಪ್ಪಿಗೆ ನೀಡಿದ್ದು, ರನ್ನಿಂಗ್ ದರವನ್ನು ರೂ. 15 ಕ್ಕೆ ನಿಗದಿಪಡಿಸಿದ್ದು, ಕಡ್ಡಾಯವಾಗಿ ಎಲ್ಲಾ ಆಟೋಗಳಲ್ಲಿ ಮೀಟರ್ ಅಳವಡಿಸಿ, ಆ ಪ್ರಕಾರವೇ ಪ್ರಯಾಣಿಕರಿಂದ ದರ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಿ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲನೆ ಮಾಡಿ, ನಿಗದಿತ ಸಂಖ್ಯೆಯ ಪ್ರಯಾಣಿಕರನ್ನು ಮಾತ್ರ ಕರೆದೊಯ್ಯಬೇಕು. ಹಾಗೂ ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಎಂದು ಡಿಸಿ ಸೂಚಿಸಿದರು.
ಸಭೆಯಲ್ಲಿ ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ ರಾಮಕೃಷ್ಣ ರೈ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಆನಂದ ಗೌಡ, ಸಹಾಯಕ ಪೋಲಿಸ್ ಆಯುಕ್ತರು ಎಂ ಮಂಜುನಾಥ್ ಶೆಟ್ಟಿ, ಹೆಚ್ಚುವರಿ ಪೋಲಿಸ್ ಅಧೀಕ್ಷಕರು ವಿಕ್ರಮ್ ವಿ ಅಮಾಟೆ, ವಿವಿಧ ಆಟೋ ಸಂಘಟನೆಗಳ ಮುಖಂಡರು ಹಾಗೂ ಆಟೋ ಚಾಲಕರು ಉಪಸ್ಥಿತರಿದ್ದರು.